ಬೆಂಗಳೂರು: ದುಬಾರಿ ಡೀಸೆಲ್ ದರ ರಸ್ತೆ ಸಾರಿಗೆ ನಿಗಮಗಳನ್ನು ಹೈರಾಣಾಗಿಸಿದೆ. ಈಗಾಗಲೇ ಸಾರಿಗೆ ನಿಗಮಗಳ ಇಂಧನ ವೆಚ್ಚ ಮಿತಿ ಮೀರಿದ್ದು, ನಷ್ಟದಲ್ಲಿರುವ ನಿಗಮಗಳಿಗೆ ದುಬಾರಿ ಇಂಧನ ದರ ದೊಡ್ಡ ಹೊರೆಯಾಗಿದೆ. ಇದಕ್ಕಾಗಿ ನಿಗಮಗಳು ಸಹಾಯಧನಕ್ಕಾಗಿ ಸರ್ಕಾರದತ್ತ ಮುಖ ಮಾಡಿವೆ.
ಖಾಸಗಿ ಬಂಕ್‌ಗಳೇ ನಿತ್ಯ ಟ್ಯಾಂಕರ್‌ಗಳಲ್ಲಿ ಡಿಪೊಗಳಲ್ಲಿರುವ ಬಂಕ್‌ಗಳಿಗೆ ಡೀಸೆಲ್ ಪೂರೈಸುತ್ತಿದ್ದವು. ಆದರೆ ಕೆಲ ದಿನಗಳಿಂದ ಡಿಪೋಗಳಲ್ಲಿನ ಬಂಕ್‌ಗಳಿಗೆ ಡೀಸೆಲ್ ಪೂರೈಸುವುದನ್ನು ಖಾಸಗಿ ಬಂಕ್‌ಗಳು ಸ್ಥಗಿತಗೊಳಿಸಿವೆ. ಇದರಿಂದಾಗಿ ಕೆಲವು ಡಿಪೊಗಳಲ್ಲಿನ ಬಂಕ್‌ಗಳಲ್ಲಿ ಡೀಸೆಲ್ ಖಾಲಿಯಾಗಿದೆ. ಇದರಿಂದ ಬಸ್‌ಗಳು ಡೀಸೆಲ್‌ಗಾಗಿ ಸಮೀಪದ ಪೆಟ್ರೋಲ್ ಬಂಕ್‌ಗಳಲ್ಲಿ ಸಾಲುಗಟ್ಟಿ ನಿಲ್ಲುತ್ತಿವೆ.
ಬಿಎಂಟಿಸಿ ಡೀಸೆಲ್ ಪೂರೈಕೆಯ ಗುತ್ತಿಗೆಯನ್ನು ಎಚ್‌ಪಿಸಿಎಲ್‌ಗೆ ನೀಡಿತ್ತು. ಈ ಅವಧಿಯು 2024ರವರೆಗೆ ಚಾಲ್ತಿಯಲ್ಲಿದೆ. ಆದರೆ, ಎಚ್‌ಪಿಸಿಎಲ್ ಕಂಪೆನಿಯ ಸಗಟು ಖರೀದಿ ದರವು ಪ್ರತಿ ಲೀಟರ್ ಡೀಸೆಲ್‌ಗೆ 119 ರೂ. ಆಗಿತ್ತು. ಚಿಲ್ಲರೆ ಡೀಸೆಲ್ ದರವು ಲೀಟರ್‌ಗೆ 87 ರೂ. ಇದೆ. ಹಾಗಾಗಿ, ಬಿಎಂಟಿಸಿಯು ಕಳೆದ ಎರಡು ತಿಂಗಳಿನಿಂದ ಚಿಲ್ಲರೆ ವ್ಯಾಪಾರಿಗಳಾದ ಖಾಸಗಿ ಬಂಕ್‌ಗಳಿಂದಲೇ ನೇರವಾಗಿ ಡೀಸೆಲ್ ಖರೀದಿ ಮಾಡಿ, ಬಸ್‌ಗಳನ್ನು ಕಾರ್ಯಾಚರಣೆಗೊಳಿಸುತ್ತಿವೆ.
ಕೆಎಸ್ಆರ್ಟಿಸಿ, ಬಿಎಂಟಿಸಿಗೆ ಇಂಧನ ಹೊರೆ: ಸದ್ಯ ಪ್ರತಿನಿತ್ಯ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಬಸ್ಗಳಿಗೆ 13 ಲಕ್ಷ ಲೀಟರ್ ಡೀಸೆಲ್ ಅಗತ್ಯ ಇದೆ. ಇದಕ್ಕಾಗಿ ರಿಟೇಲ್ ದರದಂತೆ ನಿತ್ಯ 11.44 ಕೋಟಿ ರೂ. ಪಾವತಿ ಮಾಡಲಾಗುತ್ತಿದೆ. ಸಗಟು ಇಂಧನ ದರದಂತೆ ನಿತ್ಯ 15.63 ಕೋಟಿ ರೂ. ವೆಚ್ಚ ತಗಲುತ್ತಿದೆ. ಸಗಟು ಡೀಸೆಲ್ ದರ ಸದ್ಯ 120.26 ರೂ.ಗೆ ಏರಿಕೆಯಾಗಿದೆ. ಅದೇ ರಿಟೇಲ್ ದರ 87.68 ರೂ. ಇದೆ. ಇದರಿಂದ ಸುಮಾರು 15 ಕೋಟಿ ರೂ. ಹೆಚ್ಚುವರಿ ವೆಚ್ಚವಾಗುತ್ತಿದೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ. ಕೆಎಸ್ಆರ್ಟಿಸಿಗೆ ಕಳೆದ ಮೂರು ವರ್ಷಗಳಲ್ಲಿ ಇಂಧನ ವೆಚ್ಚದ ರೂಪದಲ್ಲಿ 3,336.35 ಕೋಟಿ ರೂ. ಹೊರೆ ಬಿದ್ದಿದೆ.
2019-20ರಲ್ಲಿ ಕೆಎಸ್ಆರ್ಟಿಸಿ ಇಂಧನ ವೆಚ್ಚದ ರೂಪದಲ್ಲಿ 1401.24 ಕೋಟಿ ರೂ. ವ್ಯಯಿಸಿದೆ. ಅಂದರೆ ಒಟ್ಟು ವೆಚ್ಚದಲ್ಲಿ ಸುಮಾರು 35.5 ಶೇ. ಇಂಧನ ವೆಚ್ಚವೇ ಆಗಿತ್ತು. ಆ ವರ್ಷದಲ್ಲಿ ಕೆಎಸ್ಆರ್ಟಿಸಿಯ ಒಟ್ಟು ನಿರ್ವಹಣಾ ವೆಚ್ಚ 3,948 ಕೋಟಿ ರೂ. ಆಗಿತ್ತು.
2020-21ರಲ್ಲಿ ಕೋವಿಡ್‌ನಿಂದ ಸುಮಾರು ಮೂರು ನಾಲ್ಕು ತಿಂಗಳು ಬಸ್ಗಳ ಓಡಾಟ ಸ್ಥಗಿತವಾಗಿತ್ತು. ಬಳಿಕ ನಿಧಾನವಾಗಿ ಹಂತ ಹಂತವಾಗಿ ಬಸ್ ಸಂಚಾರವನ್ನು ಪ್ರಾರಂಭಿಸಲಾಯಿತು. ಹೀಗಾಗಿ ಇಂಧನ ವೆಚ್ಚ ಇಳಿಕೆಯಾಗಿತ್ತು. ಆ ವರ್ಷ ಕೆಎಸ್ಆರ್ಟಿಸಿ ಇಂಧನ ವೆಚ್ಚ 774.39 ಕೋಟಿ ರೂ. ಆಗಿತ್ತು. ಅಂದರೆ ಒಟ್ಟು ವೆಚ್ಚದಲ್ಲಿ 29% ಇಂಧನ ವೆಚ್ಚ ಆಗಿತ್ತು. ಆ ವರ್ಷ ಕೆಎಸ್ಆರ್ಟಿಸಿಗೆ ಬರೋಬ್ಬರಿ 2,667.59 ಕೋಟಿ ರೂ. ನಿರ್ವಹಣಾ ವೆಚ್ಚ ತಗುಲಿತ್ತು.
2021-22ರಲ್ಲಿ ಕೆಎಸ್ಆರ್ಟಿಸಿ ಇಂಧನ ವೆಚ್ಚ ರೂಪದಲ್ಲಿ ಸುಮಾರು 1,162.72 ಕೋಟಿ ರೂ. ವ್ಯಯಿಸಿದೆ. ಆ ಮೂಲಕ ನಿತ್ಯ 3.18 ಕೋಟಿ ರೂ. ಇಂಧನ ವೆಚ್ಚ ಭರಿಸುತ್ತಿದೆ. 2021-22ರಲ್ಲಿ ಸುಮಾರು 3,309.72 ಕೋಟಿ ರೂ. ನಿರ್ವಹಣಾ ವೆಚ್ಚವಾಗಿದೆ.
ಬಿಎಂಟಿಸಿಗೆ ಡೀಸೆಲ್ ವೆಚ್ಚ ದೊಡ್ಡ ತಲೆನೋವಾಗಾಗಿದೆ. ಸಗಟು ಡೀಸೆಲ್ ದರ ದುಪ್ಪಟ್ಟಾದ ಕಾರಣ, ರಿಟೇಲ್ ದರದಲ್ಲಿ ಖಾಸಗಿ ಬಂಕ್‌ಗಳಲ್ಲಿ ಡೀಸೆಲ್ ಹಾಕಿಸಿಕೊಳ್ಳಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಬಿಎಂಟಿಸಿ ಇಂಧನ ವೆಚ್ಚದ ರೂಪದಲ್ಲಿ 1,600 ಕೋಟಿ ರೂ. ವೆಚ್ಚ ಮಾಡಿದೆ.
2019-20ರಲ್ಲಿ ಬಿಎಂಟಿಸಿ ಮೇಲೆ 705.81 ಕೋಟಿ ರೂ. ಇಂಧನ ವೆಚ್ಚ ಹೊರೆ ಬಿದ್ದಿದೆ. ಅಂದರೆ ಒಟ್ಟು ವೆಚ್ಚದಲ್ಲಿ 26.4% ಇಂಧನ ವೆಚ್ಚ ಆಗಿದೆ. ಆ ವರ್ಷ 2,669.31 ಕೋಟಿ ರೂ. ನಿರ್ವಹಣಾ ವೆಚ್ಚ ತಗುಲಿತ್ತು.
2020-21ರಲ್ಲಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮೂರು ನಾಲ್ಕು ತಿಂಗಳಿಂದ ಬಸ್ ಓಡಾಟ ಇರಲಿಲ್ಲ. ಹೀಗಾಗಿ ಇಂಧನ ವೆಚ್ಚ ಸಹಜವಾಗಿಯೇ ಇಳಿಕೆಯಾಗಿತ್ತು. 361.67 ಕೋಟಿ ರೂ. ಇಂಧನ ವೆಚ್ಚ ಆಗಿತ್ತು. ಅಂದರೆ ಒಟ್ಟು ವೆಚ್ಚದಲ್ಲಿ 20.5% ಇಂಧನ ವೆಚ್ಚಕ್ಕೆ ತಗುಲಿತ್ತು. ಆ ವರ್ಷ ಬಿಎಂಟಿಸಿಗೆ ಸುಮಾರು 1,766.36 ಕೋಟಿ ರೂ. ನಿರ್ವಹಣಾ ವೆಚ್ಚದ ಹೊರೆ ಬಿದ್ದಿತ್ತು.
2021-22ರಲ್ಲಿ ಬಿಎಂಟಿಸಿಯ ಇಂಧನ ವೆಚ್ಚ ಮತ್ತೆ ಏರಿಕೆ ಕಂಡಿದೆ. 514.25 ಕೋಟಿ ರೂ. ಇಂಧನ ವೆಚ್ಚ ತಗುಲಿತ್ತು. ಇದೀಗ ಸಗಟು ಡೀಸೆಲ್ ದರ 120.26 ರೂ.ಗೆ ಏರಿಕೆಯಾಗಿರುವುದು ಬಿಎಂಟಿಸಿ ಸಂಸ್ಥೆಗೆ ಭಾರಿ ಏಟು ನೀಡಿದೆ.
ಇದನ್ನೂ ಓದಿ:ಕೇಂದ್ರ ಸರ್ಕಾರದ ಆದೇಶದ ವಿರುದ್ಧ ಹೈಕೋರ್ಟ್ ಮೊರೆ ಹೋದ ಟ್ವಿಟರ್