ಬೆಂಗಳೂರು: ಕೊರೊನಾ ಭೀತಿ ಶುರುವಾದಾಗಿನಿಂದಲೂ ಕೆಎಸ್ಆರ್ಟಿಸಿ ನಿಗಮ ಒಂದಲ್ಲ ಒಂದು ಹೊಸ ಅನ್ವೇಷಣೆ ಮಾಡುತ್ತಲೇ ಇದೆ. ಹಳೇ ಬಸ್ಗಳನ್ನು ಮೊಬೈಲ್ ಫೀವರ್ ಕ್ಲಿನಿಕ್ ಮಾಡಿದ್ದು, ಅದೇ ಹಳೆ ಬಸ್ಗಳನ್ನೇ ಬಳಸಿ, ರಾಸಾಯನಿಕ ಸಿಂಪಡಣೆಯ ಟನಲ್ ಮಾಡಿದ್ದು ಎಲ್ಲರಿಗೂ ಗೊತ್ತೆ ಇದೆ. ಸದ್ಯ ಈಗ ಹ್ಯಾಂಡ್ ಸ್ಯಾನಿಟೈಸರ್ನ ಸರದಿ.
ಹೌದು, ಇದೀಗ ತನ್ನ ಚಾಲಕರ ನಿರ್ವಾಹಕರ ಆರೋಗ್ಯದ ದೃಷ್ಟಿಯಿಂದ ಘಟಕಗಳಲ್ಲಿನ ಅನುಪಯುಕ್ತ ಯಾಂತ್ರಿಕ ಸಾಮಗ್ರಿಗಳನ್ನ ಬಳಸಿ, ಹ್ಯಾಂಡ್ ಫ್ರೀ ಸ್ಯಾನಿಟೈಸರ್ ವಿತರಣಾ ಘಟಕ ತಯಾರು ಮಾಡಿದೆ. ವಿಶೇಷ ಎಂದರೆ ಇದಕ್ಕಾಗಿ ಯಾವುದೇ ಖರ್ಚು ವೆಚ್ಚ ಹಾಕದೇ, ಡಿಪೋ ದಲ್ಲಿ ಸಿಗುವ ವಸ್ತುಗಳನ್ನ ಬಳಸಿ ಸಿದ್ದಮಾಡಿದ್ದಾರೆ.
ಹ್ಯಾಂಡ್ ಸ್ಯಾನಿಟೈಸರ್ಗೆ ಡಬ್ಬಾದ ಮೇಲ್ಭಾಗವನ್ನು ಒತ್ತುವ ಅವಶ್ಯಕತೆ ಇರೋದಿಲ್ಲ, ಬದಲಿಗೆ ಕಾಲಿನ ಕೆಳಗೆ ಪ್ರೆಸ್ ಮಾಡಿದರೆ, ಆಟೋ ಮೆಟಿಕ್ ಆಗಿ ಕೈಗೆ ಸ್ಯಾನಿಟೈಸರ್ ಲಿಕ್ವಿಡ್ ಬರಲಿದೆ. ಇದೀಗ ಎಲ್ಲ ಡಿಪೋದಲ್ಲೂ ಈ ಯುನಿಟ್ ಇಡಲಾಗಿದೆ.