ಬೆಂಗಳೂರು: ಕೆಲವೊಂದು ಮಾಧ್ಯಮಗಳಲ್ಲಿ ಗ್ರಾಚುಟಿ ಪಾವತಿ ಕುರಿತಂತೆ ತಪ್ಪು ಮಾಹಿತಿ ಬಿತ್ತರಿಸಲಾಗುತ್ತಿದ್ದು, ಮಾಧ್ಯಮದಲ್ಲಿ ವರದಿ ಮಾಡಿರುವ ಹಾಗೆ ಇಲ್ಲಿ ಯಾವುದೇ ಅಕ್ರಮ ಅವ್ಯವಹಾರ ಆಗಲಿ ಆಗಿಲ್ಲ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತಿಳಿಸಿದೆ. ಸಾರಿಗೆ ಸಂಸ್ಥೆಗಳ ನಿವೃತ್ತ ಸಿಬ್ಬಂದಿಗಳಿಗೆ ಗ್ರಾಚುಟಿ ಬಾಕಿ ಹಣ ನೀಡಬೇಕಾಗಿರುವುದನ್ನು ನಾವು ಒಪ್ಪುತ್ತೇವೆ. ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಸಮಸ್ಯೆ ಇದ್ದ ಕಾರಣ ನಿಗದಿತ ಆದಾಯ ಇಲ್ಲದೇ ಸಂಬಳ, ಡೀಸಲ್ ವೆಚ್ಚ ಸರಿದೂಗಿಸುವ ಸವಾಲಿತ್ತು, ಸಂಸ್ಥೆವಾರು ಗ್ರಾಚುಟಿ ಪಾವತಿ ಬಾಕಿ ಇದೆ ಎಂದು ಹೇಳಿದೆ.
ಗ್ರಾಚುಟಿ ಸಿಬ್ಬಂದಿಗಳಿಂದ ಯಾವುದೇ ಹಣ ಕಡಿತವಾಗುವುದಿಲ್ಲ, ಇದು ಅಕ್ಷರಶಃ ತಪ್ಪಾದ ಮಾಹಿತಿಯಾಗಿದೆ. ಇದು ಸಿಬ್ಬಂದಿಗಳಿಗೂ ತಿಳಿದ ವಿಷಯವಾಗಿದೆ. ಗ್ರಾಚುಟಿಗೆ ಸಂಬಂಧಿಸಿದಂತೆ ಯಾವುದೇ ಹಣದ ಮೊತ್ತವನ್ನು ಶೇಖರಿಸಿ ಇಟ್ಟಿಲ್ಲ, ದಿನನಿತ್ಯದ ಸಾರಿಗೆ ಆದಾಯದಲ್ಲಿಯೇ ಗ್ರಾಚುಟಿ ಹಣವನ್ನು ಸಹ ಪಾವತಿಸಲಾಗುತ್ತಿದೆ. ಆದ್ದರಿಂದ ಈ ಹಣದಲ್ಲಿ ದುರುಪಯೋಗ ಅಥವಾ ಅಕ್ರಮ ಅಥವಾ ಅವ್ಯವಹಾರದ ಮಾತೇ ಉದ್ಭವಿಸುವುದಿಲ್ಲ. ಸಿಬ್ಬಂದಿಗಳಿಂದ ಕಡಿತವೇ ಆಗದ ಹಣ ಮತ್ತು ಯಾವುದೇ ಮೊತ್ತವನ್ನು ಶೇಖರಿಸಿ ಇಟ್ಟಿರದೆ ಇರುವ ಹಣದಿಂದ ಅಕ್ರಮವಾಗಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರಸ್ತುತ ಸಾರಿಗೆ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಯು ಚೇತರಿಕೆ ಹಂತದಲ್ಲಿದ್ದು, ಹಂತ ಹಂತವಾಗಿ ಬಾಕಿ ಮೊತ್ತವನ್ನು ಪಾವತಿಸಲಾಗುವುದು. ನಮ್ಮಕಾರ್ಮಿಕರಿಗೆ ನೀಡಬೇಕಾಗಿರುವ ಯಾವುದೇ ಹಣವನ್ನು ಅವರಿಗೆ ನೀಡಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಕೊವಿಡ್ ಕಾರಣದಿಂದಾಗಿ ವಿಳಂಬವಾಗಿದೆಯೇ ಹೊರತು ಅಕ್ರಮ ಅವ್ಯವಹಾರವಾಗಿಲ್ಲ ಎಂದು ಹೇಳಿದೆ.
ಸಾರಿಗೆ ಸಂಸ್ಥೆಗಳಲ್ಲಿ ಇರುವ ಗ್ರಾಚುಟಿ ಬಾಕಿ ಮೊತ್ತ: ಕೆಎಸ್ಆರ್ಟಿಸಿಯಲ್ಲಿ 92.50 ಕೋಟಿ ರೂಪಾಯಿ, ಬಿಎಂಟಿಸಿಯಲ್ಲಿ 99.02 ಕೋಟಿ ರೂಪಾಯಿ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 33.00 ಕೋಟಿ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 170.82 ಕೋಟಿ, ಒಟ್ಟು 395. 34 ಕೋಟಿ ರೂಪಾಯಿ ಬಾಕಿ ಇದೆ.
ಮಿತವ್ಯಯದ ಬಗ್ಗೆ ಸಾರಿಗೆ ಇಲಾಖೆ ಚಿಂತನೆ: ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸಾರಿಗೆ ಹಲವಾರು ಪ್ರಯತ್ನಗಳನ್ನು ಮಾಡುತ್ತಾ ಬರುತ್ತಿದೆ. ಇದರ ಜೊತೆಗೆ ಪರಿಸರ ಮಾಲಿನ್ಯ ತಡೆ ಬಗ್ಗೆಯೂ ಗಮನ ಹರಿಸುತ್ತಿದೆ. ಡೀಸೆಲ್ ಬಸ್ಗಳ ಬಳಕೆ ಕಡಿಮೆ ಮಾಡಲು ನಗರ ಸಾರಿಗೆಗಳಲ್ಲಿ ವಿದ್ಯುತ್ ಚಾಲಿತ ಬಸ್ಗಳನ್ನು ಬಳಕೆ ಮಾಡುತ್ತಿದೆ. ಅಲ್ಲದೇ ಜೈವಿಕ ಇಂಧನ ಬಳಕೆಗೆ ಉತ್ತೇಜಿಸಲು ಶೂನ್ಯ ಮಾಲಿನ್ಯದತ್ತ ಸಾಗಲು ಸಾರಿಗೆ ಸಂಸ್ಥೆ ಮುಂದಾಗುತ್ತಿದೆ.
ಇವಿ ಪವರ್ ಪ್ಲಸ್: ಹೊಸದಾಗಿ ರಸ್ತೆಗಿಳಿಯುತ್ತಿರುವ ಇ ಬಸ್ಗಳಿಗೂ ಬ್ರಾಂಡ್ ಹೆಸರು, ಟ್ಯಾಗ್ ಲೈನ್ ನೀಡಲಾಗಿದೆ. ಈಗಾಗಲೇ ಐರಾವತ ಬ್ರ್ಯಾಂಡ್ ನಲ್ಲಿ ಆರಾಮವಾಗಿ ಮಗುವಿನಂತೆ ನಿದ್ರಿಸಿ, ಅಂಬಾರಿ ಬ್ರಾಡ್ ನಲ್ಲಿ ಕನಸುಗಳೊಂದಿಗೆ ಪ್ರಯಾಣಿಸಿ ಎನ್ನುವ ಟ್ಯಾಗ್ ಲೈನ್ ನೊಂದಿಗೆ ಬಸ್ಗಳು ಗಮನ ಸೆಳೆದಿದ್ದು, ಇದೀಗ ಇ ಬಸ್ಗಳಿಗೆ ಇವಿ ಪವರ್ ಪ್ಲಸ್ ಬ್ರಾಂಡ್ ಹೆಸರಿನಲ್ಲಿ ಅತ್ಯುತ್ತಮ ಅನುಭವ ಎಂಬ ಟ್ಯಾಗ್ ಲೈನ್ನೊಂದಿಗೆ ಬಸ್ಗಳು ಸಂಚರಿಸುತ್ತಿವೆ.
ಚಾರ್ಜಿಂಗ್ ಕೇಂದ್ರ ಸ್ಥಾಪನೆ: ಬೆಂಗಳೂರು - ಮೈಸೂರು, ಬೆಂಗಳೂರು - ಮಡಿಕೇರಿ, ಬೆಂಗಳೂರು- ವಿರಾಜಪೇಟೆ, ಬೆಂಗಳೂರು- ದಾವಣಗೆರೆ, ಬೆಂಗಳೂರು- ಶಿವಮೊಗ್ಗ, ಬೆಂಗಳೂರು-ಚಿಕ್ಕಮಗಳೂರು ಮಾರ್ಗಗಳಲ್ಲಿ ಇ ಬಸ್ಗಳನ್ನು ಸಂಚರಿಸಲು ಯೋಜಿಸಲಾಗಿದೆ. ವಿದ್ಯುತ್ ವಾಹನಗಳ ಚಾರ್ಜಿಂಗ್ ಕೇಂದ್ರವನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಈಗಾಗಲೇ ಸ್ಥಾಪಿಸಲಾಗಿದೆ. ಇ ಬಸ್ಗಳ ಸಂಚಾರಕ್ಕೆ ಪೂರಕವಾಗಿ ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಇ ಕ್ರಾಂತಿಗೆ ಮುನ್ನುಡಿ ಬರೆದ ಕೆಎಸ್ಆರ್‌ಟಿಸಿ.. ಶೂನ್ಯ ಮಾಲಿನ್ಯದತ್ತ ಸಾರಿಗೆ ಸಂಸ್ಥೆ ಚಿತ್ತ