ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೇಂದ್ರ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 2023 ವಿಶೇಷವಾಗಿ ಆಚರಿಸಲಾಯಿತು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ನಾರಿ ಶಕ್ತಿ ಪ್ರಶಸ್ತಿ ಪುರಸ್ಕೃತರಾದ ಶೋಭಾ ಗಸ್ತಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು.
![ksrtc-celebrated-international-womens-day](https://etvbharatimages.akamaized.net/etvbharat/prod-images/17937808_thum.jpg)
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, ಸಾಮಾಜಿಕ ಕಾಳಜಿ, ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಶೋಭಾ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ. ಸಮಾಜದಲ್ಲಿರುವ ದೇವದಾಸಿ ಪದ್ಧತಿಯ ವಿರುದ್ಧ ಹೋರಾಡುತ್ತಿದ್ದಾರೆ. ಇಂದು ನಮ್ಮ ನಿಗಮದ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಿ ಮಹಿಳಾ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿ ಪ್ರೇರಣೆ ತುಂಬಿದ್ದಾರೆ. ಮಹಿಳೆಯರಿಗೆ ಶಿಕ್ಷಣವೇ ಆಸ್ತಿ ಮತ್ತು ಶಕ್ತಿ ಎಂದು ಅಭಿಪ್ರಾಯಪಟ್ಟರು.
ನಿಗಮದ ವಿವಿಧ ಹುದ್ದೆಗಳಲ್ಲಿ ಒಟ್ಟು 2,821 ಮಹಿಳಾ ಉದ್ಯೋಗಿಗಳಿದ್ದಾರೆ. ಇವರು ಪುರುಷ ಕಾರ್ಮಿಕರಿಗೆ ಸಮಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿಗಮವು ಎಲ್ಲ ರೀತಿಯಲ್ಲಿಯೂ ಅವರನ್ನು ಗೌರವಿಸಿ ಪ್ರೋತ್ಸಾಹಿಸುತ್ತಿರುವ ಮತ್ತು ಕಲ್ಯಾಣಕ್ಕಾಗಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
![ksrtc-celebrated-international-womens-day](https://etvbharatimages.akamaized.net/etvbharat/prod-images/17937808_thu.jpg)
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶೋಭಾ ಗಸ್ತಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ಅಗತ್ಯ. ಸರ್ಕಾರಗಳು ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನಮ್ಮಂತಹ ಅನೇಕರು ದೇವದಾಸಿ ಪದ್ಧತಿಯಿಂದ ಹೊರಬರಲು ಸಹಾಯ ಮಾಡುತ್ತಿದೆ. ಸಮಾಜವು ಹೆಣ್ಣುಮಕ್ಕಳನ್ನು ಕೂಡ ಗೌರವಿಸಬೇಕು ಎಂದರು.
1994ರಿಂದ ನಾನು ದೇವದಾಸಿ ಪದ್ಧತಿ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ನಮ್ಮ ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ಎಲ್ಲರಂತೆ ಬದುಕಲು ಮಾರ್ಗದರ್ಶನ, ಧೈರ್ಯ ಹಾಗೂ ಸಹಕಾರವನ್ನು ನೀಡುತ್ತಿದ್ದೇನೆ. ಬೆಳಗಾವಿಯಿಂದ ನನ್ನನ್ನು ಇಲ್ಲಿಗೆ ಆಹ್ವಾನಿಸಿ, ಗೌರವಿಸಿದ್ದು, ನಮ್ಮಂತಹ ಹಲವರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಸಾರಿಗೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಗಳು ಕೂಡ ಅಭಿನಂದನಾರ್ಹರು ಎಂದು ಹೇಳಿದರು.
![ksrtc-celebrated-international-womens-day](https://etvbharatimages.akamaized.net/etvbharat/prod-images/17937808_thumbn.jpg)
ಈ ಸಂದರ್ಭ ನಿಗಮದ ವತಿಯಿಂದ ಶೋಭಾ ಗಸ್ತಿ ಅವರಿಗೆ ನೆನಪಿನ ಕಾಣಿಕೆ, 20,000 ರೂಪಾಯಿ ಗೌರವ ಧನ ನೀಡಿ ಗೌರವಿಸಲಾಯಿತು. ಜೊತೆಗೆ ನಿಗಮದ 17 ವಿಭಾಗಗಳಲ್ಲಿ ಉತ್ತಮ ಕಾರ್ಯ ಸಾಧನೆ ತೋರಿದ ನಿರ್ವಾಹಕಿಯರು, ತಾಂತ್ರಿಕ ಸಿಬ್ಬಂದಿಗಳು ಹಾಗೂ ಭದ್ರತಾ ಸಿಬ್ಬಂದಿಗಳ ಪೈಕಿ ಒಟ್ಟು 42 ಮಹಿಳಾ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ) ಪ್ರಶಾಂತ್ ಕುಮಾರ್ ಮಿಶ್ರ ಹಾಗೂ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಬಿಎಂಟಿಸಿಯಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣ : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಇಂದು ಮಹಿಳಾ ಪ್ರಯಾಣಿಕರಿಗೆ ಬಿಎಂಟಿಸಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆ ಇಂದು ಬೆಂ.ಮ.ಸಾ.ಸಂಸ್ಥೆಯ ಎಲ್ಲಾ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಒಂದು ದಿನದ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.
ಬಿಎಂಟಿಸಿಯ ಎಲ್ಲ ಮಾದರಿಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಬಹುದು. ಮಂಗಳವಾರ ಮಧ್ಯರಾತ್ರಿ 12 ಗಂಟೆಯಿಂದ ಇಂದು ಮಧ್ಯರಾತ್ರಿ 12 ಗಂಟೆಯವರೆಗೆ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಇದನ್ನೂ ಓದಿ : ಮಹಿಳಾ ದಿನಾಚರಣೆ: ಮಹಿಳಾ ಪ್ರಯಾಣಿಕರಿಗೆ ಬಿಎಂಟಿಸಿಯಲ್ಲಿ ನಾಳೆ ಉಚಿತ ಪ್ರಯಾಣ