ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) 2015ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆಸಿದ ವೇಳೆ ಅಕ್ರಮ ನಡೆದಿದ್ದು, ಆಯ್ಕೆ ಪ್ರಕ್ರಿಯೆಗೆ ತಡೆ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತು ಸಂತ್ರಸ್ತ ಅಭ್ಯರ್ಥಿಗಳು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಹಾಗೂ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅವರಿದ್ದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲ ಡಿ.ಆರ್.ರವಿಶಂಕರ್ ವಾದಿಸಿ, ಆಯ್ಕೆ ಪ್ರಕ್ರಿಯೆಯಲ್ಲಿ ಬಹಳ ದೊಡ್ಡ ಅಕ್ರಮ ನಡೆದಿದೆ. ಅದರ ತನಿಖೆ ನಡೆಸಬೇಕು ಮತ್ತು ಆಯ್ಕೆ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಕೋರಿದರು.
ಕೆಲ ಕಾಲ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ಕೆಪಿಎಸ್ಸಿ ಮತ್ತು ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿತು. ಹಾಗೆಯೇ, ಅರ್ಜಿಗೆ ಸಂಬಂಧಿಸಿದ ಆಕ್ಷೇಪಣೆಗಳನ್ನು ಎರಡು ವಾರಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆದೇಶಿಸಿ ವಿಚಾರಣೆ ಮುಂದೂಡಿತು.
ಅರ್ಜಿದಾರರ ಆರೋಪ:
ಆಯ್ಕೆ ಪ್ರಕ್ರಿಯೆ ಅವಧಿಯಲ್ಲಿ ಸೂಪರ್ ಯೂಸರ್ ಕಂಟ್ರೋಲ್ ಘಟಕದ ಪಾಸ್ ವರ್ಡ್ ಅಕ್ರಮವಾಗಿ ಪಡೆದು ಪದೇ ಪದೆ ಲಾಗಿನ್ ಆಗಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಅಗತ್ಯ ಅಂಕಗಳನ್ನು ನೀಡುವ ಮೂಲಕ ಅಕ್ರಮ ಎಸಗಲಾಗಿದೆ. ಈ ಸೂಪರ್ ಯೂಸರ್ ಕಂಟ್ರೋಲ್ ಘಟಕದ ಪಾಸ್ ವರ್ಡ್ ಪರೀಕ್ಷಾ ಮುಖ್ಯ ನಿಯಂತ್ರಕರು ಮಾತ್ರ ಉಪಯೋಗಿಸಲು ಅವಕಾಶವಿದೆ. ಆದರೆ, ಹೆಚ್ಚು ಜನ ಪಾಸ್ ವರ್ಡ್ ಬಳಕೆ ಮಾಡಿದ್ದಾರೆ. ಈ ಕುರಿತಂತೆ ಅಭ್ಯರ್ಥಿಗಳ ಲಿಖಿತ ಪರೀಕ್ಷೆಯ ವೈಯಕ್ತಿಕ ಅಂಕಗಳನ್ನು ಕೇಳಿದರೆ ಕೆಪಿಎಸ್ಸಿ ನಿರಾಕರಿಸುತ್ತಿದೆ. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲೂ ಮಾಹಿತಿ ಸಿಗುತ್ತಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಅರ್ಜಿದಾರರ ಬೇಡಿಕೆಗಳು:
ಕೆಪಿಎಸ್ಸಿ ಅಕ್ರಮವಾಗಿ ತಮಗೆ ಬೇಕಾದ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಿದೆ. ಹೀಗಾಗಿಯೇ, ಅಭ್ಯರ್ಥಿಗಳ ಪ್ರಶ್ನೆ ಪತ್ರಿಕೆಯ ಡಿಜಿಟಲ್ ಮೌಲ್ಯಮಾಪನದ ವಿವರಗಳನ್ನು ನಮಗೆ ನೀಡುತ್ತಿಲ್ಲ. ಆದ್ದರಿಂದ 2015ನೇ ಸಾಲಿನ ಆಯ್ಕೆ ಪಟ್ಟಿಗೆ ತಡೆ ನೀಡಬೇಕು. ಕೆಪಿಎಸ್ಸಿ ನಡೆಸಿರುವ ಅಕ್ರಮಗಳ ಆರೋಪದ ಬಗ್ಗೆ ಮಾಹಿತಿ ಪಡೆಯಲು ಸತ್ಯ ಶೋಧನಾ ತಂಡ ರಚಿಸಬೇಕು. ಹಾಗೆಯೇ, ಪ್ರಕರಣವನ್ನು ಸೈಬರ್ ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸಲು ಹೈಕೋರ್ಟ್ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.
ಕೆಪಿಎಸ್ಸಿ ಆಯ್ಕೆ ಪ್ರಕ್ರಿಯೆ:
ಕೆಪಿಎಸ್ಸಿ 2015ನೇ ಸಾಲಿನ 438 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗೆ 2017ರಲ್ಲಿ ಅಧಿಸೂಚನೆ ಹೊರಡಿಸಿತ್ತು. 2017ರ ಆಗಸ್ಟ್ 20ರಂದು ಪ್ರಾಥಮಿಕ ಪರೀಕ್ಷೆ, ಡಿಸೆಂಬರ್ 23ರಂದು ಮುಖ್ಯ ಪರೀಕ್ಷೆ ನಡೆಸಿತ್ತು. ನಂತರ 2019ರ ಜನವರಿಯಲ್ಲಿ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟಿಸಿ, ಅದೇ ವರ್ಷ ಆಗಸ್ಟ್ 2ರಂದು ಸಂದರ್ಶನ ನಡೆಸಿತ್ತು. ಅಂತಿಮ ಆಯ್ಕೆ ಪಟ್ಟಿಯನ್ನು 2020ರ ಜನವರಿಯಲ್ಲಿ ಬಿಡುಗಡೆ ಮಾಡಿತ್ತು.