ಬೆಂಗಳೂರು : ಕೆಪಿಎಸ್ಸಿ ವಿಳಂಬ ಧೋರಣೆ ಖಂಡಿಸಿ ನಾಳೆ ಕೆಪಿಎಸ್ಸಿ ಕಚೇರಿ ಮುಂದೆ ಬಿಜೆಪಿ ಶಾಸಕರಾದ ಸುರೇಶ್ ಕುಮಾರ್ ಹಾಗೂ ರವಿ ಸುಬ್ರಮಣ್ಯ ಅವರು ಪ್ರತಿಭಟನೆ ನಡೆಸಲಿದ್ದಾರೆ.
2015ರ ಸಾಲಿನ ಕೆಪಿಎಸ್ಸಿ ಪರೀಕ್ಷೆ ನಡೆದು ಫಲಿತಾಂಶ ಹೊರಬಿದ್ದರೂ, ಅಭ್ಯರ್ಥಿಗಳ ಆಯ್ಕೆಗಾಗಿ ಸಂದರ್ಶನ ವೇಳಾಪಟ್ಟಿ ಪ್ರಕಟಿಸದೇ ಕೆಪಿಎಸ್ಸಿ ವಿಳಂಬ ಧೋರಣೆ ಎದುರಿಸುತ್ತಿದೆ. ಹೀಗಾಗಿ ಶೀಘ್ರ ಸಂದರ್ಶನ ವೇಳಾಪಟ್ಟಿ ಪ್ರಕಟಿಸುವಂತೆ ಆಗ್ರಹಿಸಿ ಮತ್ತು ಸಂದರ್ಶನ ಪಾರದರ್ಶಕವಾಗಿರಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುವುದಾಗಿ ಮಾಜಿ ಸಚಿವ ಸುರೇಶ್ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮತ್ತೊಮ್ಮೆ ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಮುಂದೆ ಪ್ರತಿಭಟನೆ ಮಾಡುವ ಅಗತ್ಯತೆ ಉಂಟಾಗಿದೆ. ನಾನು ಕಳೆದ ಏಳು ತಿಂಗಳಲ್ಲಿ ಕನಿಷ್ಟ ಇಪ್ಪತೈದು ಬಾರಿಯಾದರೂ ಲೋಕಸೇವಾ ಆಯೋಗದ ಕಚೇರಿಗೆ ಹೋಗಿ ಸಂತ್ರಸ್ತ ಅಭ್ಯರ್ಥಿಗಳ ಸಮಸ್ಯೆಗಳ ಪರಿಹಾರ ಕುರಿತು ಆಗ್ರಹಿಸಿದ್ದೇನೆ. 27, ಡಿಸೆಂಬರ್ 2018ರಲ್ಲಿ ಒಮ್ಮೆ ಕೆಪಿಎಸ್ಸಿ ಕಟ್ಟಡದ "ಕದ ತಟ್ಟುವ ಕಾರ್ಯಕ್ರಮ"ವನ್ನೂ ಹಮ್ಮಿಕೊಂಡಿದ್ದೆ. ಕೆಲವು ಬೇಡಿಕೆಗಳಿಗೆ ಪರಿಹಾರ ದೊರಕಿರುವುದು ಸಮಾಧಾನ ತಂದಿದೆಯಾದರೂ ಬಹು ಮುಖ್ಯವಾದ ಕರ್ನಾಟಕ ರಾಜ್ಯದ ಆಡಳಿತಕ್ಕೆ ಸಂಬಂಧ ಪಟ್ಟ ಬೇಡಿಕೆ ಈವರೆಗೂ ಇತ್ಯರ್ಥವಾಗಿಲ್ಲ ಎಂದು ಸುರೇಶ್ ಕುಮಾರ್ ಆರೋಪಿಸಿದ್ದಾರೆ.
2015ರ ಸಾಲಿನ ಕೆಎಎಸ್ ಪರೀಕ್ಷೆಯ ಅಧಿಸೂಚನೆ ಮೇ 12, 2017ಕ್ಕೆ ಪ್ರಕಟವಾಗಿತ್ತು. ಈ ಸಂಬಂಧ ಆಗಸ್ಟ್ 18, 2017ಕ್ಕೆ ಪ್ರಾಥಮಿಕ ಪರೀಕ್ಷೆ ನಡೆದಿತ್ತು. ಡಿಸೆಂಬರ್ 22, 2017ಗೆ ಮುಖ್ಯ ಪರೀಕ್ಷೆ ನಡೆಸಲಾಗಿತ್ತು. ಆದರೆ, ಫಲಿತಾಂಶ ಪ್ರಕಟಿಸಲು ವಿಳಂಬವಾಗಿತ್ತು. 2018 ರ ಆಗಸ್ಟ್ ತಿಂಗಳಿನಿಂದ ನಾನು ಆಯೋಗದ ಅಧ್ಯಕ್ಷರು, ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ನಿರಂತರ ಮನವಿ ಸಲ್ಲಿಸಿದರೂ ಫಲಿತಾಂಶ ಪ್ರಕಟವಾಗಿದ್ದು ಜನವರಿ 28, 2019ಕ್ಕೆ. ಆದರೆ, ಈ ಆರು ತಿಂಗಳ ನಂತರವೂ ಸಂದರ್ಶನ ಪ್ರಕ್ರಿಯೆ ನಡೆಯಲೇ ಇಲ್ಲ. ಇದೀಗ ಅಭ್ಯರ್ಥಿಗಳೆಲ್ಲಾ ಆತಂಕ, ಹತಾಶೆ ಎದುರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮಾರ್ಚ್ ತಿಂಗಳಲ್ಲಿ ಚುನಾವಣಾ ನೀತಿ ಸಂಹಿತೆಯ ಕಾರಣ ನೀಡಲಾಗಿತ್ತು. ಚುನಾವಣಾ ನೀತಿ ಸಂಹಿತೆ ಅವಧಿ ಮುಗಿದಿದ್ದರೂ ಈಗಲೂ ಸಹ ಸಂದರ್ಶನದ ವೇಳಾಪಟ್ಟಿ ಘೋಷಣೆಯಾಗಿಲ್ಲ. ಈ ಎಲ್ಲಾ ಕಾರಣಗಳಿಂದ ಹತಾಶೆಯ ಅಂಚಿನಲ್ಲಿರುವ ಸಂತ್ರಸ್ತ ಅಭ್ಯರ್ಥಿಗಳ ಪರವಾಗಿ ನಾಳೆ ಬೆಳಿಗ್ಗೆ10.30ಕ್ಕೆ ಕೆಪಿಎಸ್ಸಿ ಕಟ್ಟಡದ ಮುಂದೆ ಸಂದರ್ಶನ ವೇಳಾಪಟ್ಟಿಗೆ ಆಗ್ರಹಿಸಿ ಮತ್ತು ಸಂದರ್ಶನ ಪಾರದರ್ಶಕವಾಗಿರಬೇಕೆಂದು ಒತ್ತಾಯಿಸಿ ನಾನು ಮತ್ತು ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಇಬ್ಬರೂ ಹೋರಾಟ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಸುರೇಶ್ಕುಮಾರ್ ತಿಳಿಸಿದ್ದಾರೆ.