ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರ ಕಣ್ಣು ಈಗ ನೇರ ಆಡಳಿತ ಮಂಡಳಿಗಳ ಮೇಲೆ ಬಿದ್ದಿದೆ. ಆಟಗಾರರ ವಿಚಾರಣೆ ಬಳಿಕ ಈಗ ಟೂರ್ನಿಯ ಆಯೋಜಕರು ಹಾಗೂ ತಂಡಗಳಿಗೆ ಸಿಸಿಬಿ ಚಾಟಿ ಬೀಸಿದೆ.
ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ಕೈಗೆತ್ತಿಕೊಂಡು ತನಿಖೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳಿಗೆ ಆಟಗಾರರ ತನಿಖೆ ವೇಳೆ ಕೆಲ ಮಾಹಿತಿಗಳು ಬಹಿರಂಗವಾಗಿವೆ. ಸದ್ಯ ಎಲ್ಲಾ ಟೀಂ ಮ್ಯಾನೇಜರ್ಗಳ ವಿಚಾರಣೆಯನ್ನು ಸಿಸಿಬಿ ಕೈಗೆತ್ತಿಗೊಂಡಿದೆ.
ಈವರೆಗಿನ ತನಿಖೆ ವೇಳೆ ಆಟಗಾರರು ಮಾತ್ರವಲ್ಲದೆ ತಂಡದ ಕೆಲ ಮಾಲೀಕರು, ತರಬೇತುದಾರರು ಸಹ ಫಿಕ್ಸಿಂಗ್ನಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿರುವುದರಿಂದ ಸ್ಪಷ್ಟನೆ ನೀಡುವಂತೆ ಎಲ್ಲಾ 7 ತಂಡಗಳ ಫ್ರಾಂಚೈಸಿ ಮಾಲೀಕರು ಹಾಗೂ ಕೆಪಿಎಲ್ ಆಯೋಜಿಸುತ್ತಿರುವ ರಾಜ್ಯ ಕ್ರಿಕೆಟ್ ಮಂಡಳಿಗೂ ಸೂಚಿಸಲಾಗಿದೆ.
ಈಗಾಗಲೇ ಒಂದು ತಂಡದ ಮಾಲೀಕ, ಓರ್ವ ಬುಕ್ಕಿ, ಡ್ರಮ್ಮರ್ ಹಾಗೂ ಮೂವರು ಆಟಗಾರರು ಸೇರಿದಂತೆ 6 ಜನರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಇನ್ನೂ ಕೆಲ ಆಟಗಾರರನ್ನು ವಿಚಾರಣೆ ನೆಡೆಸುತ್ತಿದ್ದಾರೆ. ಬಹುತೇಕ ತಂಡಗಳ ಮಾಲೀಕರು, ಮ್ಯಾನೇಜ್ಮೆಂಟ್ ಪಾತ್ರ ಕಂಡು ಬಂದಿರುವುದರಿಂದ ನೋಟಿಸ್ ಜಾರಿ ಮಾಡಲಾಗಿದ್ದು, ಪಂದ್ಯಾವಳಿಯಲ್ಲಿರುವ ತಂಡಗಳು ಯಾವು? ಮಾಲೀಕರು, ಮ್ಯಾನೇಜ್ಮೆಂಟ್ ಸದಸ್ಯರು ಯಾರು? ಯಾವ ತಂಡದ ಆಟಗಾರರು ಯಾರು? ಎಷ್ಟು ಮೊತ್ತಕ್ಕೆ ಬಿಕರಿಯಾಗಿದ್ದಾರೆ? ಹೀಗೆ 18 ಮಾದರಿಯ ಪ್ರಶ್ನೆಗಳಿಗೆ ಉತ್ತರಿಸುವಂತೆ ನೋಟಿಸ್ ಹೊರಡಿಸಲಾಗಿದೆ.