ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆಯನ್ನ ಸಿಸಿಬಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಸದ್ಯ ಸ್ಯಾಂಡಲವುಡ್ನ ಕೆಲ ನಟಿಯರು ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ದಂಧೆಯಲ್ಲಿ ಭಾಗಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ನಟಿಯರ ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಈ ಕುರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ಯಾವುದೇ ನಟಿ ವಿಚಾರಣೆಯನ್ನ ಗೌಪ್ಯ ಸ್ಥಳದಲ್ಲಿ ನಡೆಸುವ ವಿಚಾರ ಇಲ್ಲ. ಕೆಪಿಎಲ್ ಪ್ರಕರಣದಲ್ಲಿ ಭಾಗಿಯಾದ ನಟಿಯರಿಗೆ ನಾವು ನೋಟಿಸ್ ಕೊಡುತ್ತೇವೆ. ಅವರು ನಮ್ಮ ಅಧಿಕೃತ ಸಿಸಿಬಿ ಕಚೇರಿಯಲ್ಲೇ ವಿಚಾರಣೆ ಎದುರಿಸಬೇಕು. ಅದು ಬಿಟ್ಟು ಬೇರೆ ಹೊಟೇಲ್, ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸುವುದಿಲ್ಲ. ತನಿಖೆ ಅಧಿಕೃತ ಸಿಸಿಬಿ ಕಚೇರಿಯಲ್ಲೇ ನಡೆಯುತ್ತೆ. ಯಾರಿಗೂ ಯಾವುದೇ ರಿಯಾಯಿತಿ ಇಲ್ಲ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಕೆಪಿಎಲ್ ಪ್ರಕರಣದಲ್ಲಿ ಸ್ಯಾಂಡಲ್ವುಡ್ನ ಕೆಲ ನಟಿಯರು ಭಾಗಿಯಾದ ಹಿನ್ನಲೆ ವಿಚಾರಣೆ ನಡೆಸಲು ಸಿಸಿಬಿ ತಂಡ ಮುಂದಾಗಿತ್ತು. ಈ ವೇಳೆ ಸಿಸಿಬಿ ಕಚೇರಿ ಬಿಟ್ಟು ಬೇರೆ ಕಡೆ ವಿಚಾರಣೆ ನಡೆಸಲು ನಟಿ ಮಣಿಯರು, ನಮ್ಮ ಪಾತ್ರ ಮ್ಯಾಚ್ ಫಿಕ್ಸಿಂಗ್ನಲ್ಲಿ ಇಲ್ಲ. ನಮ್ಮ ಇಮೇಜ್ ಹಾಳಾಗುತ್ತೆ. ಹಾಗಾಗಿ ಬೇರೆ ಕಡೆ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದರು.
ಯಾಕೆ ನೋಟಿಸ್?: ಕೆಪಿಎಲ್ ಹಗರಣದಲ್ಲಿ ಆಟಗಾರರನ್ನು ಮ್ಯಾಚ್ ಫಿಕ್ಸಿಂಗ್ಗೆ ಒಪ್ಪಿಸಿ, ಇದಕ್ಕಾಗಿ ಕೋಟ್ಯಂತರ ರೂ. ಹಣ ಪಡೆದಿರುವ ಆರೋಪ ನಟಿಯರ ಮೇಲಿದೆ.