ಬೆಂಗಳೂರು: ನೂತನವಾಗಿ ಕೆಪಿಸಿಸಿಯ ಸಾರಥ್ಯ ವಹಿಸಿಕೊಂಡಿರುವ ಮುಖಂಡರು ನಾಳೆ ಒಂದೆಡೆ ಸೇರಿ ಸಭೆ ನಡೆಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್ ಹಾಗೂ ಸತೀಶ್ ಜಾರಕಿಹೊಳಿ ಸಭೆ ನಡೆಸಲಿದ್ದಾರೆ. ಮುಂಬರುವ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸುವ ಹಾಗೂ ಮುಂಬರುವ ಚುನಾವಣೆಗೆ ಸಿದ್ಧವಾಗಿರುವ ಸಂಬಂಧ ಕೈಗೊಳ್ಳಬಹುದಾದ ಕ್ರಮಗಳು, ಹಮ್ಮಿಕೊಳ್ಳಬಹುದಾದ ಕಾರ್ಯ ಯೋಜನೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಬೆಳಗ್ಗೆ 11.30ಕ್ಕೆ ರೇಸ್ ಕೋರ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಸಭೆಯ ನಂತರ ಈ ಎಲ್ಲಾ ಮುಖಂಡರು ಪಕ್ಷದ ಕಚೇರಿಯಲ್ಲಿ ಉಪಸ್ಥಿತಲಿರಲಿದ್ದಾರೆ. ಇಲ್ಲಿಗೆ ಆಗಮಿಸುವ ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ.
ಸಾಮರಸ್ಯವೇ ಸವಾಲು:
ಕೆಪಿಸಿಸಿ ಅಧ್ಯಕ್ಷರಾಗಿ ನಿಯೋಜಿತರಾಗಿರುವ ಡಿ.ಕೆ.ಶಿವಕುಮಾರ್ ಮುಂದೆ ಸಾಕಷ್ಟು ದೊಡ್ಡ ಸವಾಲುಗಳಿದ್ದು, ಪಕ್ಷದ ಹಿರಿಯ ಹಾಗೂ ಕಿರಿಯ ನಾಯಕರನ್ನು ಸಮನ್ವಯಕ್ಕೆ ಪಡೆದು ಮುನ್ನಡೆಯಬೇಕಾಗಿದೆ. ಇದುವರೆಗೂ ಒಬ್ಬರಿದ್ದ ಕಾರ್ಯಾಧ್ಯಕ್ಷ ಸ್ಥಾನ ಮೂರಕ್ಕೇರಿದೆ. ಮೂವರನ್ನೂ ಸಮಾನವಾಗಿ ಹಾಗೂ ಹೆಚ್ಚಿನ ಪ್ರಾಶಸ್ತ್ಯ ನೀಡಿ ಮುನ್ನಡೆಸಿಕೊಂಡು ಸಾಗಬೇಕಾದ ಜವಾಬ್ದಾರಿ ಕೂಡ ಅವರ ಹೆಗಲ ಮೇಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬೊಬ್ಬರು ಒಂದೊಂದು ವಿಧದಲ್ಲಿ ಹಿರಿತನ ಹೊಂದಿದ್ದು, ಪರಸ್ಪರ ಸಮನ್ವಯ ಮೂಡಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಲಿದೆ.
ಶಾಸಕಾಂಗ ಪಕ್ಷದ ನಾಯಕ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರನ್ನು ಕಡೆಗಣಿಸುವಂತಿಲ್ಲ. ಹೆಚ್ಚು ವಿಶ್ವಾಸಕ್ಕೆ ಪಡೆದು ಅವರ ಮಾರ್ಗದರ್ಶನದಲ್ಲಿ ಸಾಗಬೇಕಾಗಿದೆ. ಇನ್ನೊಂದೆಡೆ ಡಿಕೆಶಿ ಕೂಡ ಹಳೆ ಮೈಸೂರು ಭಾಗದ ಉತ್ತಮ ಪ್ರಾಬಲ್ಯ ಹೊಂದಿದ್ದು, ಸಿದ್ದರಾಮಯ್ಯರನ್ನು ಮೀರಿ ಮುಂದೆ ಹೋಗುವಂತಿಲ್ಲ. ಈ ಒಂದು ತಡೆ ಕೂಡಾ ಅವರಿಗಿದೆ. ಇನ್ನೊಂದೆಡೆ ಬೆಳಗಾವಿ ಭಾಗದಲ್ಲಿ ತಮ್ಮ ಆಪ್ತರಾದ ಲಕ್ಷ್ಮಿ ಹೆಬ್ಬಾಳ್ಕರ್ಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವಂತೆಯೂ ಇಲ್ಲ. ಈ ಕಾರ್ಯದಲ್ಲಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ವಿರೋಧ ಕಟ್ಟಿ ಕೊಳ್ಳಬೇಕಾಗುತ್ತದೆ.
ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆಗೆ ಮುಂದಾದರೆ ಈಶ್ವರ್ ಖಂಡ್ರೆ ಅವರನ್ನು ಕಡೆಗಣಿಸುವಂತಿಲ್ಲ. ಅವರನ್ನು ವಿಶ್ವಾಸಕ್ಕೆ ಪಡೆದು ಮುನ್ನಡೆದರೆ ಈ ಭಾಗದಲ್ಲಿ ಲಿಂಗಾಯತ ಸಮುದಾಯದವರು ಒಂದಾದರೂ, ಒಕ್ಕಲಿಗರನ್ನು ಒಗ್ಗೂಡಿಸುವುದು ಕಷ್ಟ ಸಾಧ್ಯವಾಗಲಿದೆ. ಇನ್ನು ಮತ್ತೋರ್ವ ಕಾರ್ಯಾಧ್ಯಕ್ಷ ಸಲೀಮ್ ಅಹಮದ್ ಹೆಚ್ಚಾಗಿ ದಿಲ್ಲಿಯಲ್ಲಿ ತಮ್ಮ ಪ್ರಾಬಲ್ಯ ಹೊಂದಿದ್ದು, ರಾಜ್ಯದಲ್ಲಿ ಇವರ ಸದ್ಬಳಕೆ ಆಗುವುದು ಅತ್ಯಲ್ಪ. ರಾಜ್ಯದೆಲ್ಲೆಡೆ ಸಂಚರಿಸಿ ಪಕ್ಷ ಸಂಘಟನೆ ಮಾಡುವ ಮಹತ್ವದ ಜವಾಬ್ದಾರಿ ಹೊಂದಿರುವ ಡಿಕೆಶಿಗೆ ಸಾಕಷ್ಟು ಸವಾಲುಗಳು ಹಾಗೂ ನಾಯಕರ ನಡುವೆಯೇ ಇದ್ದು, ಇದನ್ನ ಎದುರಿಸಿ ಅವರು ಯಾವ ರೀತಿ ಮುನ್ನಡೆಯಲಿದ್ದಾರೆ, ನಾಳಿನ ಸಭೆಯ ಮೂಲಕ ಯಾವ ರೀತಿ ಸಂದೇಶವನ್ನು ತಮ್ಮ ಜತೆಗಾರ ನಾಯಕರಿಗೆ ನೀಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.