ಬೆಂಗಳೂರು: ನಾಲಿಗೆ ಹರಿಬಿಡುವುದರಲ್ಲಿ, ಸುಳ್ಳು ಹೇಳುವುದರಲ್ಲಿ ರಾಜ್ಯದಲ್ಲೇ ಕುಖ್ಯಾತಿ ಪಡೆದಿರುವ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು 'ವಿಷಕಾರಿ' ಎಂದು ಸಂಭೋದಿಸಿರುವುದನ್ನು ಕಾಂಗ್ರೆಸ್ ಪಕ್ಷ ಒಕ್ಕೋರಲಿನಿಂದ ತೀವ್ರವಾಗಿ ಖಂಡಿಸುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ತಿಳಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಸತತ 9 ಬಾರಿ ಶಾಸಕರಾಗಿ, 2 ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಕಟೀಲ್ ಅವರು ಬಾಯಿಗೆ ಬಂದಂತೆ ಮಾತನಾಡುವ ಮುನ್ನ ರಾಷ್ಟ್ರಕ್ಕೆ, ರಾಜ್ಯಕ್ಕೆ ಹಾಗೂ ಕಲಬುರಗಿ ಜಿಲ್ಲೆಗೆ ಖರ್ಗೆಯವರ ಕೊಡುಗೆ ಏನೆಂಬುದನ್ನು ಅರಿತುಕೊಳ್ಳಲಿ. ಖರ್ಗೆಯವರು ರಾಜ್ಯ ಸರ್ಕಾರದಲ್ಲಿ ವಿವಿಧ ಇಲಾಖೆಗಳಲ್ಲಿ ಸಚಿವರಾಗಿ ಕರ್ನಾಟಕಕ್ಕೆ ಸಲ್ಲಿಸಿದ ಸೇವೆ ಅನನ್ಯ ಎಂದಿದ್ದಾರೆ.
ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಹೊತ್ತಿದ್ದ ಹೈ-ಕ ಭಾಗಕ್ಕೆ 371(ಜೆ) ವಿಶೇಷ ಮೀಸಲಾತಿ ಸಿಗಲು ಪ್ರಮುಖ ಕಾರಣ ಖರ್ಗೆಯವರ ನಿರಂತರ ಹೋರಾಟ. ಅಲ್ಲದೇ, ರೈಲ್ವೆ ಡಿವಿಷನ್, ಇಎಸ್ಐ ಆಸ್ಪತ್ರೆ, ಕೇಂದ್ರೀಯ ವಿಶ್ವವಿದ್ಯಾಲಯ, ಎನ್ಐಎಂಜಡ್, ಕಲಬುರಗಿ ವಿಮಾನ ನಿಲ್ದಾಣ ಹಾಗೂ ಜವಳಿ ಪಾರ್ಕ್ ಮುಂತಾದ ಸಹಸ್ರಾರು ಯೋಜನೆಗಳನ್ನ ಕಲ್ಯಾಣ ಕರ್ನಾಟಕಕ್ಕೆ ತಂದದ್ದು ಮಾನ್ಯ ಖರ್ಗೆಯವರು.
ಇಷ್ಟೇ ಅಲ್ಲದೇ, ಯುಪಿಎ ಸರ್ಕಾರದಲ್ಲಿ ರೈಲ್ವೆ ಹಾಗೂ ಕಾರ್ಮಿಕ ಸಚಿವರಾಗಿದ್ದ ವೇಳೆ ಈ ಇಲಾಖೆಗಳಲ್ಲಿ ಅಮೂಲಾಗ್ರ ಬದಲಾವಣೆಗೆ ನಾಂದಿ ಹಾಡಿದರು. ಅವರ ಅವಧಿಯಲ್ಲೇ ಇಎಸ್ಐ ಅಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಯಿತು. ರಾಜ್ಯದ ರಸ್ತೆ, ಕೃಷಿ ಹಾಗೂ ನೀರಾವರಿ ಯೋಜನೆಗಳಿಗೆ ಅನುದಾನ ತರುವಲ್ಲಿಯೂ ಖರ್ಗೆಯವರ ಪರಿಶ್ರಮ ಅಪರಿಮಿತವಾದದ್ದು ಎಂದು ವಿವರಿಸಿದ್ದಾರೆ.
ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದ ವೇಳೆ ತಮ್ಮ ಮಾತಿನ ವೈಖರಿಯ ಮೂಲಕ ಕೇಂದ್ರದ ವೈಫಲ್ಯಗಳನ್ನು ಜನರೆದರು ತೆರೆದಿಡುತ್ತಿದ್ದ ಖರ್ಗೆಯವರನ್ನು ಸೋಲಿಸಲು ಹಳ್ಳಿಯಿಂದ ಡೆಲ್ಲಿಯವರೆಗೆ ಬಿಜೆಪಿಯ ಎಲ್ಲಾ ನಾಯಕರು ಕುತಂತ್ರ ಮಾಡಿ, ಅವರನ್ನು ಸೋಲಿಸಿದರು. ಆದರೆ, ಅವರ ಸೋಲಿನಿಂದ ಅತಿ ಹೆಚ್ಚು ನಷ್ಟ ಅನುಭವಿಸಿದ್ದು ಮಾತ್ರ ಕಲಬುರಗಿ ಜಿಲ್ಲೆ ಹಾಗೂ ನಮ್ಮ ರಾಜ್ಯ. ಅವರು ಸಂಸದರಾದ ನಂತರ ಖರ್ಗೆಯವರ ಅವಧಿಯಲ್ಲಿ ಮಂಜೂರಾಗಿದ್ದ ಒಂದೊಂದೇ ಯೋಜನೆಗಳು ಜಿಲ್ಲೆಯ ಕೈ ತಪ್ಪುತ್ತಿವೆ.
ಈಗಾಗಲೇ ಪ್ರತ್ಯೇಕ ರೈಲ್ವೆ ವಿಭಾಗ, ಎನ್ಐಎಂಜಡ್, ಜವಳಿ ಪಾರ್ಕ್ ಯೋಜನೆಗೆ ಬಿಜೆಪಿ ಸರ್ಕಾರ ಎಳ್ಳು ನೀರು ಬಿಟ್ಟಿದೆ. ಖರ್ಗೆಯವರು ವಿಷಕಾರಿಯಾದರೆ, ಬಿಜೆಪಿಯವರೇನು ಮಕರಂದ ಸೂಸುವವರೇ? ಬಿಜೆಪಿಯವರಿಂದ ಕಲಬುರಗಿ ಜಿಲ್ಲೆಗೆ ಒಂದು ಸಚಿವ ಸ್ಥಾನವೂ ಸಿಕ್ಕಿಲ್ಲ. ಕೇವಲ ಕಲ್ಯಾಣ ಕರ್ನಾಟಕವೆಂದು ಮರುನಾಮಕರಣ ಮಾಡಿದ್ದು ಬಿಟ್ಟರೆ, ಈ ಭಾಗಕ್ಕೆ ಬಿಜೆಪಿ ಕೊಟ್ಟಿದ್ದಕ್ಕಿಂತ ಕಿತ್ತುಕೊಂಡಿದ್ದೇ ಹೆಚ್ಚು. ಆದ್ದರಿಂದ, ನಳಿನ್ ಕುಮಾರ್ ಅವರು ಕಟೀಲ್ ಖರ್ಗೆಯವರ ಕುರಿತು ಬಾಯಿಗೆ ಬಂದಂತೆ ಮಾತನಾಡುವ ಮುನ್ನ ಮಲ್ಲಿಕಾರ್ಜುನ ಖರ್ಗೆಯವರ ಸಾಧನೆಗಳನ್ನೊಮ್ಮೆ ಅರಿತುಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.