ಬೆಂಗಳೂರು: ಶಾಸಕಿ ಸೌಮ್ಯ ರೆಡ್ಡಿ ತಪ್ಪು ಮಾಡಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಿ. ಆದರೆ ಇಬ್ಬರು ಶಾಸಕಿಯರನ್ನು ರಸ್ತೆಯಲ್ಲಿ ಕೆಡವಿದ ಸರ್ಕಾರ ಮೊದಲು ಸೂಕ್ತ ಉತ್ತರ ನೀಡಲಿ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆಗ್ರಹಿಸಿದ್ದಾರೆ.
ಬೆಂಗಳೂರಿನ ಜಯನಗರದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಾಸಕಿ ಸೌಮ್ಯ ರೆಡ್ಡಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅವರ ತಪ್ಪಿದ್ದರೆ ಕ್ರಮ ತೆಗೆದುಕೊಳ್ಳಲಿ. ಆದರೆ ಅಂಜಲಿ ನಿಂಬಾಳ್ಕರ್ ಹಾಗೂ ಸೌಮ್ಯ ರೆಡ್ಡಿ ಕೆಳಗೆ ಬಿದ್ದಿದ್ದರು. ಅವರು ಕೆಳಗೆ ಬಿದ್ದಿದ್ದು ಹೇಗೆ? ಅದರ ಬಗ್ಗೆ ಸರ್ಕಾರ ಮೊದಲು ಹೇಳಲಿ. ಗೃಹ ಸಚಿವರು ಮೊದಲು ಇದನ್ನ ತಿಳಿಸಲಿ. ಕೆಳಗೆ ಬಿದ್ದಿದ್ದರಿಂದ ಅಂಜಲಿ ಅಸ್ವಸ್ಥರಾದರು. ಅವರಿಬ್ಬರೂ ಶಾಸಕರು, ಅವರನ್ನ ಕೆಳಗೆ ಬೀಳಿಸಿದ್ದು ಯಾರು? ಎಂದು ಪ್ರಶ್ನಿಸಿದ ಅವರು ಇವತ್ತು ರಾಜ್ಯ ಕೇಸರಿ ಮಯವಾಗುತ್ತಿದೆ. ಕಾಂಗ್ರೆಸ್ನವರ ದೂರು ದಾಖಲಿಸಿಕೊಳ್ಳುತ್ತಿಲ್ಲ. ದಾಖಲಿಸಬೇಡಿ ಅಂತ ಬಿಜೆಪಿಯವರೇ ಒತ್ತಡ ಹಾಕ್ತಿದ್ದಾರಂತೆ ಎಂದು ಆರೋಪಿಸಿದರು.
ಕೆಪಿಸಿಸಿ ಅಧ್ಯಕ್ಷರೂ ಇದರ ಬಗ್ಗೆ ಹೇಳಿದ್ದರು. ರಾಜ್ಯದಲ್ಲಿ ಎಲ್ಲವನ್ನೂ ಕೇಸರಿಮಯ ಮಾಡುತ್ತಿದ್ದಾರೆ. ನಾವು ಇಂತಹ ಪ್ರಯತ್ನಕ್ಕೆ ಅವಕಾಶ ನೀಡುವುದಿಲ್ಲ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಜೀವಂತವಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಓದಿ: ಬಿಬಿಎಂಪಿ, ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು: ರಾಮಲಿಂಗಾ ರೆಡ್ಡಿ
ಬಿಬಿಎಂಪಿ ಚುನಾವಣೆ ಗಮನದಲ್ಲಿಟ್ಟುಕೊಂಡು ಕಾರ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ ಅನ್ನೋ ಪ್ರಶ್ನೆಗೆ ಉತ್ತರಿಸಿ, ವೀರಪ್ಪ ಮೊಯ್ಲಿ ಸಿಎಂ ಆಗಿದ್ದಾಗಿನಿಂದಲೂ ನಾನು ಸಚಿವನಾಗಿದ್ದೇನೆ. ಬೆಂಗಳೂರನ್ನ ಗಟ್ಟಿಗೊಳಿಸೋ ಕೆಲಸ ಮಾಡುತ್ತಿದ್ದೇನೆ. ಬಿಬಿಎಂಪಿ ಚುನಾವಣೆ ಹಾಗೂ 2023 ರಾಜ್ಯ ಚುನಾವಣೆ ನನ್ನ ಗುರಿ.
ಕಾಂಗ್ರೆಸ್ಗೆ ಕೈ ಕೊಟ್ಟ ಶಾಸಕರ ಕೈ ಹಿಡಿದು ಕರೆತರ್ತಾರಾ ಎಂಬ ಮಾತಿಗೆ ಇಂಬು ಕೊಡುವ ಸುಳಿವನ್ನು ನೀಡಿದ ರಾಮಲಿಂಗಾರೆಡ್ಡಿ, ಕೆಲವು ಕಾರಣಗಳಿಗೆ ಬೆಂಗಳೂರಿನ ಶಾಸಕರು ಕಾಂಗ್ರೆಸ್ ಬಿಟ್ಟು ಹೋಗಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಅವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡುತ್ತೇವೆ ಎಂದರು.