ಬೆಂಗಳೂರು: ಬಿಜೆಪಿ ಸರ್ಕಾರ ಮಾನವೀಯತೆ ಕಳೆದುಕೊಂಡಿದೆ. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ತಾಯಿ, ನವಜಾತ ಅವಳಿ ಶಿಶುಗಳ ಸಾವಿಗೀಡಾಗಿದ್ದ ಪ್ರಕರಣದಲ್ಲಿ ಯಾರೇ ಆಗಿದ್ದರೂ ಮಾನವೀಯತೆ ಮೆರೆಯಬೇಕು. ಆದರೆ ಈ ಸರ್ಕಾರದಲ್ಲಿ ಮಾನವೀಯತೆ ಹಣ ಕೊಟ್ಟವರಿಗೆ ಮಾತ್ರ ಸಿಗುತ್ತಿದೆ ಎಂದು ಕೆಪಿಸಿಸಿ ಸಂವಹನ ವಿಭಾಗ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಕುಟುಕಿದ್ದಾರೆ.
ಹಣ ಕೊಟ್ಟವರಿಗೆ ಪೋಸ್ಟಿಂಗ್: ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಹಣ ಕೊಟ್ಟವರಿಗೆ ಮಾತ್ರ ಪೋಸ್ಟಿಂಗ್ ನೀಡಲಾಗುತ್ತದೆ. ಹೀಗಾಗಿ ಅಧಿಕಾರಿ ಹಾಗೂ ಸಿಬ್ಬಂದಿ ಮಾನವೀಯತೆ ಮರೆತು ಹಣ ಗಳಿಸುವ ಕಡೆಗೆ ಗಮನಹರಿಸಿದ್ದಾರೆ. ಇಲ್ಲಿ ಗರ್ಭಿಣಿಗೆ ನೋವು ಇದ್ದು ಗೊತ್ತಿದ್ದರೂ ಕಾರ್ಡ್ ಕೊಡಿ, ಹಣ ಕೊಡಿ ಎಂದು ಹೇಳಿ ಚಿಕಿತ್ಸೆ ನೀಡಿಲ್ಲ. ಇದು ಸರ್ಕಾರದ ಪ್ರಾಯೋಜಿತ ಹತ್ಯೆ. ಇದಕ್ಕೆ ಕಾರಣ ಯಾರು? ಅಮಾನತುಗೊಳಿಸಿದರೆ ಸಾಕೇ? ಅವರ ಪರವಾನಿಗೆ ರದ್ದು ಮಾಡಬೇಕು. ವೈದ್ಯರು ವೃತ್ತಿ ಆರಂಭಿಸುವಾಗ ಮಾನವೀಯತೆ ಆಧಾರದ ಮೇಲೆ ಪ್ರತಿಜ್ಞೆ ಮಾಡಿರುತ್ತಾರೆ. ಅದನ್ನು ಮರೆತು ಇಂದು ಈ ರೀತಿ ಚಿಕಿತ್ಸೆ ತಿರಸ್ಕರಿಸಿದರೆ ಈ ಸರ್ಕಾರಕ್ಕೆ ಜೀವಕ್ಕೆ ಬೆಲೆ ಎಷ್ಟಿದೆ ಎಂಬುದು ಗೊತ್ತಾಗುತ್ತದೆ ಎಂದು ಹರಿಹಾಯ್ದರು.
ಬೆಂಗಳೂರು ರಸ್ತೆ ಗುಂಡಿಗೆ 21 ಬಲಿ: ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ 21 ಬಲಿಯಾಗಿದ್ದು, ಈ ಬಗ್ಗೆ ಸರ್ಕಾರ ಏನಾದರೂ ಕ್ರಮ ಕೈಗೊಂಡಿದೆಯೇ? ಜನ ಯಾಕೆ ಸಾಯುತ್ತಿದ್ದಾರೆ ಎಂದು ಕೇಳಿದರೆ, ನಿಮ್ಮ ಸರ್ಕಾರದಲ್ಲಿ ರಸ್ತೆ ಗುಂಡಿ ಇರಲಿಲ್ಲವೇ ಎಂದು ಕೇಳುತ್ತಿದ್ದಾರೆ ಎಂದು ಅಪಾದಿಸಿದರು.
ಸುಧಾಕರ್ ರಾಜೀನಾಮೆ ಆಗ್ರಹ: ಸಚಿವ ಸುಧಾಕರ್ ರಾಜೀನಾಮೆ ಬಗ್ಗೆ ಕೇಳಿದ ಪ್ರಶ್ನೆಗೆ, ಅವರು ವಿಮ್ಸ್ ಪ್ರಕರಣ, ಆಕ್ಸಿಜನ್ ಕೊರತೆ ಪ್ರಕರಣ, ಕೋವಿಡ್ ನಿರ್ವಹಣೆ ವೈಫಲ್ಯ ಆದಾಗಲೇ ರಾಜೀನಾಮೆ ನೀಡಬೇಕಿತ್ತು. ಆಗ ರಾಜೀನಾಮೆ ನೀಡದವರಿಂದ ಈಗ ನಿರೀಕ್ಷೆ ಮಾಡಲು ಸಾಧ್ಯವೇ? ಈ ಸರ್ಕಾರಕ್ಕೆ ಭ್ರಷ್ಟಾಚಾರ ಸೋಂಕು ತಗುಲಿ ಸೋಂಕಿತ ಸರ್ಕಾರವಾಗಿದೆ ಎಂದು ಕಿಡಿಕಾರಿದರು.
ಇದನ್ನೂಓದಿ:'ಕೈ' ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕಾರ ಶುರು; ಬಂಡಾಯ ಸ್ಪರ್ಧೆಗಿಲ್ಲ ಅವಕಾಶ