ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಸ್ಥಾನದ ನೇಮಕ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡಿದೆ ಎಂಬ ಮಾತು ಕೇಳಿ ಬರುತ್ತಿದೆ.
ಇಡಿ ವಿಚಾರಣೆ ತೂಗುಗತ್ತಿ ಎದುರಿಸುತ್ತಿದ್ದರೂ ಸಹ ಸಮರ್ಥ ಒಕ್ಕಲಿಗ ನಾಯಕ ಎಂಬ ಕಾರಣಕ್ಕೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸಲು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ತೀರ್ಮಾನಿಸಿದ್ದರು ಎನ್ನಲಾಗಿತ್ತು. ಆದರೆ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ನಿರ್ಧಾರ ಹಿಂಪಡೆಯಲು ತೀರ್ಮಾನಿಸಿದ್ದಾರೆ. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಹುದ್ದೆ ಕೂಡ ತಮ್ಮ ಆಪ್ತರ ಬಳಿ ಇರಲಿ ಎಂದು ಅವರು ಬಯಸಿದ್ದಾರೆ ಎಂಬ ಮಾಹಿತಿ ಇದೆ.
ಈ ಹಿನ್ನೆಲೆ ದಿನೇಶ್ ಗುಂಡೂರಾವ್ ಬಳಿಯೇ ಹುದ್ದೆ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿ ವಿಫಲರಾಗಿರುವ ಅವರು ಸದ್ಯ ತಮಗಿರುವ ಪ್ರಭಾವ ಬಳಸಿ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಲು ಆರಂಭಿಸಿದ್ದಾರೆ. ದಿನೇಶ್ ಗುಂಡೂರಾವ್ ಕೈತಪ್ಪುವ ಸ್ಥಾನಕ್ಕೆ ತಮ್ಮ ಆಪ್ತರನ್ನು ನೇಮಿಸಲು ಅವರು ಯೋಜನೆ ರೂಪಿಸಿದ್ದಾರೆ. ಈ ಹಿನ್ನೆಲೆ ತಮಗಿರುವ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ. ಡಿಕೆಶಿಗೆ ಅಧ್ಯಕ್ಷ ಸ್ಥಾನ ಫಿಕ್ಸ್ ಮಾಡಿರುವ ಸೋನಿಯಾ ಗಾಂಧಿಗೆ ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರ ಮೂಲಕ ಹೇಳಿಸಿ ಸದ್ಯ ನಿಗದಿಯಾಗಿರುವ ಡಿಕೆಶಿ ಹೆಸರನ್ನು ತೆಗೆದು ಹಾಕಿಸುವ ಪ್ರಯತ್ನ ನಡೆಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಅಧ್ಯಕ್ಷ ಸ್ಥಾನ ತಮ್ಮವರಿಗೆ ನೀಡಬೇಕೆಂದು ಪಟ್ಟು ಹಿಡಿದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಈ ವಿಚಾರವಾಗಿ ಈಗಾಗಲೇ ರಾಹುಲ್ ಗಾಂಧಿ ಅವರೊಂದಿಗೆ ಮಾತ್ರವಲ್ಲದೆ ಗುಲಾಂ ನಬಿ ಆಜಾದ್, ಎ.ಕೆ.ಆ್ಯಂಟನಿ ಮೂಲಕವೂ ಲಾಬಿ ನಡೆಸಿದ್ದಾರೆ. ಈ ಎಲ್ಲಾ ಕಾರಣಗಳ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ಘೋಷಿಸಲು ನಿರ್ಧರಿಸಿದ್ದ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಆದೇಶವನ್ನು ತಾತ್ಕಾಲಿಕವಾಗಿ ಮುಂದೂಡಿದೆ. ಮುಂದಿನ ದಿನಗಳಲ್ಲಿ ಸಾಕಷ್ಟು ರಾಜಕೀಯ ಚಟುವಟಿಕೆಗಳು ನಡೆಯಲಿದ್ದು, ಡಿಕೆಶಿ ಕೂಡ ಲಾಬಿ ನಡೆಸುವ ಸಾಧ್ಯತೆ ಇದೆ. ಆದರೆ ಶತಾಯಗತಾಯ ಇದನ್ನು ತಡೆಯಲು ಸಿದ್ದರಾಮಯ್ಯ ಕೂಡ ಪ್ರಯತ್ನ ಮುಂದುವರಿಸಲಿದ್ದಾರೆ ಎನ್ನಲಾಗ್ತಿದೆ.