ಬೆಂಗಳೂರು : ರಾಜ್ಯದಲ್ಲಿ ಈ ಬಾರಿ ಮಳೆಯಿಂದಾಗಿ ಸಾಕಷ್ಟು ನಷ್ಟವುಂಟಾಗಿದೆ. ರಾಜ್ಯ ಸರ್ಕಾರ ಮತ್ತೆ 8 ಸಾವಿರ ಕೋಟಿ ನಷ್ಟವಾಗಿದೆ ಎಂದು ಅಂದಾಜು ಮಾಡಿದೆ. ಕೇಂದ್ರ ಸರ್ಕಾರ ಇನ್ನೆಷ್ಟು ಮೊತ್ತ ಬಿಡುಗಡೆ ಮಾಡುವುದೋ ಕಾದು ನೋಡಬೇಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ.
ಪ್ರವಾಹ ಪೀಡಿತ ಸ್ಥಳಕ್ಕೆ ಕೇಂದ್ರ ಅಧ್ಯಯನ ತಂಡದ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಳೆದ ಬಾರಿ ಪ್ರವಾಹಕ್ಕೆ 50 ಸಾವಿರ ಕೋಟಿ ನಷ್ಟವುಂಟಾಗಿತ್ತು. ರಾಜ್ಯ ಸರ್ಕಾರ 35 ಸಾವಿರ ಕೋಟಿ ನೆರವಿಗಾಗಿ ಕೇಂದ್ರಕ್ಕೆ ಡಿಮ್ಯಾಂಡ್ ಮಾಡಿತ್ತು. ಆದರೆ, ಅಲ್ಲಿಂದ ಬಂದಿದ್ದು ಕೇವಲ 1800 ಕೋಟಿ ಮಾತ್ರ. ಈ ಸಾರಿಯೂ ಕೇಂದ್ರ ಅಧ್ಯಯನ ತಂಡ ಇದನ್ನು ಪರಿಶೀಲಿಸಿದೆ. ರಾಜ್ಯ ಸರ್ಕಾರ 8 ಸಾವಿರ ಕೋಟಿ ಅಂದಾಜು ಮಾಡಿದೆ ಎನ್ನಲಾಗುತ್ತಿದೆ. ಇನ್ನೆಷ್ಟು ಬಿಡುಗಡೆಯಾಗುವುದೋ ಕಾದು ನೋಡಬೇಕಿದೆ ಎಂದರು.
ರಾಜ್ಯದಿಂದ ಬಿಜೆಪಿಯ 25 ಸಂಸದರಿದ್ದಾರೆ. ಇವರೆಲ್ಲರೂ ಯಾಕೆ ಕೇಂದ್ರದ ಮೇಲೆ ಒತ್ತಡ ತರುತ್ತಿಲ್ಲ. ಹೆಚ್ಚಿನ ನೆರವನ್ನು ಯಾಕೆ ಕೇಳುತ್ತಿಲ್ಲ. ರಾಜ್ಯ ಸರ್ಕಾರ ಇಲ್ಲವೇ ಇಲ್ಲಿನ ಸಂಸದರು ದನಿ ಎತ್ತದಿದ್ದರೆ, ಕೇಂದ್ರ ಹಣ ಹೇಗೆ ಬಿಡುಗಡೆ ಮಾಡಲು ಸಾಧ್ಯ. ಕನಿಷ್ಠ ಸರ್ವ ಪಕ್ಷ ನಿಯೋಗ ಕೊಂಡೊಯ್ದರೆ ಆಗಲಾದ್ರೂ ರಾಜ್ಯದ ಸಮಸ್ಯೆ ವಿವರಿಸಬಹುದು ಎಂದು ಅಭಿಪ್ರಾಯ ಪಟ್ಟರು.
ವಿಜಯೇಂದ್ರ ಜತೆ ಪ್ರಚಾರ ಮಾಡಿದ್ದ ರಾಗಿಣಿ : ರಾಗಿಣಿ ನಮ್ಮ ಪಕ್ಷದ ಸದಸ್ಯರಲ್ಲವೆಂಬ ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಅವರೇ ರಾಗಿಣಿ ಜೊತೆ ಪ್ರಚಾರ ಮಾಡಿಲ್ಲವೇ?. ಅವರು ಚುನಾವಣೆಗಳಲ್ಲಿ ಪ್ರಚಾರ ಮಾಡಿದ್ದಾರೆ. ಅದ್ಹೇಗೆ ಅವರು ಪಕ್ಷದ ಸದಸ್ಯರಲ್ಲ ಎಂದು ಹೇಳುತ್ತಾರೆ.
ರಾಗಿಣಿ ಇವತ್ತಿಗೂ ಅವರ ಸಂಪರ್ಕದಲ್ಲೇ ಇದ್ದಾರೆ. ಈಗ ತನಿಖೆ ನಡೆಯುತ್ತಿದೆ. ಅದು ಮತ್ತಷ್ಟು ತೀವ್ರವಾಗಬೇಕು. ಯುವಕರು ದಾರಿ ತಪ್ಪಲು ಈ ಡ್ರಗ್ಸ್ ಕಾರಣವಾಗಿದೆ. ಸಿಎಂ, ಗೃಹ ಸಚಿವರು ವಿಶೇಷ ಟಾಸ್ಕ್ ಪೋರ್ಸ್ ರಚಿಸಬೇಕು. ಹೊಸ ಕಮಿಟಿ ಮಾಡಿ ತಡೆಗಟ್ಟುವ ಬಗ್ಗೆ ಗಮನಹರಿಸಬೇಕು. ಬೆಂಗಳೂರು ವಿಶ್ವ ಡ್ರಗ್ಸ್ ಸಿಟಿಯಾಗುತ್ತಿದೆ. ಇದರಲ್ಲಿ ಯಾರೇ ಇರಲಿ ಅವರ ಮೇಲೆ ಕ್ರಮವಾಗಬೇಕು. ಡ್ರಗ್ಸ್ ದಂಧೆಗೆ ಕಡಿವಾಣ ಹಾಕಬೇಕು. ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದರು.