ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಆಯ್ಕೆಗೆ ಸದ್ಯ ಕಾಲ ಕೂಡಿ ಬರುವ ಲಕ್ಷಣ ಗೋಚರಿಸುತ್ತಿಲ್ಲ.
ಮೂಲಗಳ ಪ್ರಕಾರ ಅಧ್ಯಕ್ಷರ ಆಯ್ಕೆ ಏಪ್ರಿಲ್ ಮೊದಲ ವಾರದಲ್ಲಿ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಕಳೆದ ತಿಂಗಳವರೆಗೂ ರಾಜ್ಯ ನಾಯಕರ ನಡುವಿನ ಆಂತರಿಕ ತಿಕ್ಕಾಟದಿಂದಾಗಿ ಮುಂದೂಡಲ್ಪಟ್ಟಿದ್ದ ಅಧ್ಯಕ್ಷರ ಆಯ್ಕೆ, ಈಗ ಯಾವ ಕಾರಣಕ್ಕೆ ಮುಂದೂಡಲ್ಪಡುತ್ತಿದೆ ಎಂಬ ಮಾಹಿತಿ ಸಮರ್ಪಕವಾಗಿ ಸಿಗುತ್ತಿಲ್ಲ. ಹೈಕಮಾಂಡ್ ನಾಯಕರು ಕೆಪಿಸಿಸಿಗೆ ಅಧ್ಯಕ್ಷರನ್ನಾಗಿ ನೇಮಿಸಲು ಮೀನಾಮೇಷ ಎಣಿಸುತ್ತಿದೆ. ಸದ್ಯಕ್ಕೆ ಅಧ್ಯಕ್ಷರ ಆಯ್ಕೆಯ ಘೋಷಣೆ ಆಗುವುದು ಅನುಮಾನ ಎನ್ನಲಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷರಾಗುವ ಕನಸು ಕಾಣುತ್ತಿರುವ ಮಾಜಿ ಸಚಿವ ಡಿ ಕೆ ಶಿವಕುಮಾರ್ಗೆ ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದ್ದಾರೆ. ಕಳೆದವಾರ ದಿಲ್ಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದ ಡಿಕೆಶಿಗೆ ಮಾಹಿತಿ ನೀಡಿ ಕಳಿಸಲಾಗಿದೆ. ಏಪ್ರಿಲ್ ಮೊದಲ ವಾರಕ್ಕೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ಒಮ್ಮತ ಮೂಡುತ್ತಿಲ್ಲ. ಹಿನ್ನೆಲೆ ಏಪ್ರಿಲ್ ಮೊದಲ ವಾರ ನಡೆಯುವ ಎಐಸಿಸಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಈ ವಿಚಾರ ಮುಂದಿಟ್ಟು ಅಧ್ಯಕ್ಷರ ಆಯ್ಕೆಗೆ ಒಮ್ಮತ ಪಡೆಯಲು ನಿರ್ಧರಿಸಲಾಗಿದೆ.
ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಗದ್ದುಗೆಗೆ ಮಾಜಿ ಸಚಿವ ಡಿ ಕೆ ಶಿವಕುಮಾರ್, ಎಂ ಬಿ ಪಾಟೀಲ್ ಮತ್ತಿತರ ನಾಯಕರು ಪೈಪೋಟಿ ನಡೆಸಿದ್ದರು. ಇವರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂಬ ಗೊಂದಲದಲ್ಲಿ ರಾಷ್ಟ್ರೀಯ ನಾಯಕರು ಇದ್ದಾರೆ. ಈ ಹಿನ್ನೆಲೆ ರಾಷ್ಟ್ರೀಯ ನಾಯಕರುಗಳು ಸಮ್ಮುಖದಲ್ಲಿ ಆಯ್ಕೆ ವಿಚಾರ ಪ್ರಸ್ತಾಪಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದಾರೆ. ಇದೇ ವಿಷಯವನ್ನು ಕಳೆದ ವಾರ ದಿಲ್ಲಿಗೆ ತೆರಳಿದ್ದ ಶಿವಕುಮಾರ್ಗೂ ತಿಳಿಸಿ ಕಳಿಸಿದ್ದರು. ಸದ್ಯ ಅಧ್ಯಕ್ಷರ ಆಯ್ಕೆ ಆಗುವುದು ಅನುಮಾನ ಎಂಬ ಮಾಹಿತಿ ಲಭಿಸಿದೆ.
ಮಾ.5ಕ್ಕೆ ರಾಜ್ಯ ಸರ್ಕಾರ ಬಜೆಟ್ ಮಂಡಿಸುತ್ತಿದೆ. ಮಾ.31ರವರೆಗೂ ಬಜೆಟ್ ಮೇಲಿನ ಚರ್ಚೆ ಹಾಗೂ ಅಧಿವೇಶನ ಮುಂದುವರಿಯಲಿದೆ. ಈ ಅಧಿವೇಶನದ ನಂತರವೇ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರ ನಿರ್ಧರಿಸಲಾಗುವುದು. ಅಲ್ಲಿಯವರೆಗೂ ಆದಷ್ಟು ಸರ್ಕಾರದ ಲೋಪದೋಷಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಪಕ್ಷವನ್ನು ಸಮರ್ಥಿಸುವ ಕಾರ್ಯ ಮಾಡಿ ಎಂದು ದಿಲ್ಲಿಗೆ ತೆರಳಿದ್ದ ಡಿಕೆಶಿಗೆ ಹೈಕಮಾಂಡ್ ನಾಯಕರು ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಇದೆ.