ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾ.28ರಿಂದ ಮೂರು ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.
ಮಾ. 28 ರಿಂದ ಮೂರು ದಿನ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಮುಂದಿನ ಸೋಮವಾರ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಗೆ ಡಿಕೆಶಿ ಸಾಥ್ ನೀಡಲಿದ್ದಾರೆ.
ಸೋಮವಾರವೇ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲಿರುವ ಬಸವರಾಜ್ ತುರುವಿಹಾಳ್ಗೂ ಸಾಥ್ ನೀಡಲಿರುವ ಡಿಕೆಶಿ, ಮಾರನೇ ದಿನ ಬಸವಕಲ್ಯಾಣ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಲಿರುವ ಮಲ್ಲಮ್ಮ ನಾರಾಯಣ ರಾವ್ ಅವರ ಪರವಾಗಿ ಉಪಸ್ಥಿತರಿರಲಿದ್ದಾರೆ.
ಡಿ.ಕೆ ಶಿವಕುಮಾರ್ ಮಾತ್ರವಲ್ಲದೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಮೂರು ದಿನ ರಾಜ್ಯ ಪ್ರವಾಸದಲ್ಲಿದ್ದು, ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಓದಿ : ಶಾಸಕರು ಯಡಿಯೂರಪ್ಪರನ್ನು ಅನ್ನಪೂರ್ಣೇಶ್ವರಿ ಎಂದು ಕರೆದಿದ್ದಾರೆ: ರೇಣುಕಾಚಾರ್ಯ
ಭೇಟಿಯ ವೇಳೆಯೆ ಆಯಾ ಜಿಲ್ಲೆಗಳ ಕಾಂಗ್ರೆಸ್ ಮುಖಂಡರ ಜೊತೆ ರಾಜ್ಯ ನಾಯಕರು ಚರ್ಚೆ ನಡೆಸಲಿದ್ದು, ಉಪಚುನಾವಣೆ ಗೆಲುವು ಹಾಗೂ ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆಗೆ ಕೈಗೊಳ್ಳಬಹುದಾದ ಕಾರ್ಯತಂತ್ರದ ಕುರಿತು ಚರ್ಚೆ ನಡೆಸಲಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಮಾಜಿ ಸಚಿವರು ಮತ್ತು ಶಾಸಕರ ಜೊತೆಗೂ ಡಿಕೆಶಿ ಹಾಗೂ ಸಿದ್ದರಾಮಯ್ಯ ಸಭೆ ಸೇರಿ ಚರ್ಚಿಸಲಿದ್ದಾರೆ.