ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ ಅವರನ್ನು ಸದಾಶಿವನಗರದ ನಿವಾಸದಲ್ಲಿ ಶನಿವಾರ ಭೇಟಿ ಮಾಡಿ, ರಾಜ್ಯವನ್ನು ಕಂಗೆಡಿಸಿರುವ ಕೊರೊನಾ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಿದರು.
ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ವಿಶೇಷ ಕಾರ್ಯ ಪಡೆ ರಚಿಸಲಾಗಿದೆ. ಜೊತೆಗೆ ವಿಶೇಷ ವೈದ್ಯರ ತಂಡವನ್ನು ರಚಿಸಿ ಅಗತ್ಯ ರೋಗಿಗಳಿಗೆ ಆನ್ಲೈನ್ ಮೂಲಕ ಹಾಗೂ ಆಫ್ ಲೈನ್ ಮೂಲಕ ಚಿಕಿತ್ಸೆ ನೀಡುವ ಕಾರ್ಯ ನಡೆದಿದೆ. ನಗರದ ವಿವಿಧ ಭಾಗಗಳಲ್ಲಿ ಹಾಗೂ ರಾಜ್ಯದ ಹಲವೆಡೆ ಬಡವರು ಹಾಗೂ ಕಾರ್ಮಿಕರಿಗೆ ಉಚಿತವಾಗಿ ಆಹಾರ ಪೂರೈಸುವ ಕಾರ್ಯವನ್ನು ಕಾಂಗ್ರೆಸ್ ನಾಯಕರು ಕೈಗೊಂಡಿರುವ ಕುರಿತು ಚರ್ಚಿಸಿದರು.
ರಾಜ್ಯದ ವಿವಿಧೆಡೆ ರೈತರಿಂದ ತರಕಾರಿಗಳನ್ನು ಖರೀದಿಸಿ, ಅಗತ್ಯವಿರುವ ಹಾಗೂ ಕೂಲಿ ಕಾರ್ಮಿಕರಿಗೆ ಉಚಿತವಾಗಿ ವಿತರಿಸುವಂತೆ ಇಂದು ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದರು.
ಜವಾಬ್ದಾರಿಯುತ ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ಕೈಗೊಂಡಿರುವ ಎಲ್ಲಾ ನಿಲುವುಗಳು ಹಾಗೂ ಮುಂದೆ ಕೈಗೊಳ್ಳುವ ನಿರ್ಧಾರಗಳ ಕುರಿತು ಶಿವಕುಮಾರ್ ಚರ್ಚಿಸಿದರು. ಇದೇ ರೀತಿ ಇನ್ನಿತರ ಹಿರಿಯ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಚರ್ಚಿಸುವುದಾಗಿ ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರಾಗಿ ಹತ್ತು ವರ್ಷಗಳ ಅನುಭವವಿರುವ ಪರಮೇಶ್ವರ್ ಅವರಿಂದ ಪಕ್ಷ ಸಂಘಟನೆ ಹಾಗೂ ಬಲವರ್ಧನೆ ಬಗ್ಗೆ ಸಲಹೆಗಳನ್ನು ಪಡೆದರು. ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಸಂಬಂಧ ಹಾಗೂ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ಪಡೆದು ಮುನ್ನಡೆಸುವ ವಿಚಾರವಾಗಿ ಪರಮೇಶ್ವರ್ ಅವರಿಂದ ಮಾರ್ಗದರ್ಶನ ಪಡೆದರು ಎನ್ನಲಾಗಿದೆ.