ಬೆಂಗಳೂರು: ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಸರ್ಕಾರದ ಸಾಧನೆ ಶೂನ್ಯ, ಲೂಟಿ ಮಾಡಿದ್ದೇ ಸಾಧನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಒಂದು ವರ್ಷದ ಬಿ.ಎಸ್.ಯಡಿಯೂರಪ್ಪನವರ ಆಟವನ್ನು ವಿವರಿಸುವುದಾದರೆ ಒಂದನೇ ತಿಂಗಳು ಮಂತ್ರಿಮಂಡಲ ಇಲ್ಲದೆ ತಿರುಗಾಟ, ಎರಡನೇ ತಿಂಗಳು ನೆರೆ ಪರಿಹಾರ ಕೊಡದೆ ನರಳಾಟ, ಮೂರನೇ ತಿಂಗಳು ಉಪ ಚುನಾವಣೆ ಎಂಬ ಬಯಲಾಟ, ನಾಲ್ಕನೇ ತಿಂಗಳು ಮಂತ್ರಿ ಮಂಡಲ ಎಂಬ ದೊಂಬರಾಟ, ಐದು- ಆರರಲ್ಲಿ ಮಂತ್ರಿಗಿರಿಗಾಗಿ ಕಿತ್ತಾಟ, ಏಳು-ಎಂಟರಲ್ಲಿ ಕೊರೊನಾ ಲಾಕ್ಡೌನ್ ಎಂಬ ಹೊರಳಾಟ, ಒಂಭತ್ತು-ಹತ್ತು ಕೊರೊನಾ ಎಂಬ ಕಿರುಚಾಟ, ಹನ್ನೊಂದು-ಹನ್ನೆರಡನೇ ತಿಂಗಳು "ಜನಸಾಮಾನ್ಯರಿಗೆ ಮಾತ್ರ ಸಾವು ಬದುಕಿನ ಆಟ" ನಡೆದಿದೆ ಎಂದರು.
ಆರೋಗ್ಯ ಪರಿಕರಗಳ ಖರೀದಿಯಲ್ಲಾಗಿರುವ ಭ್ರಷ್ಟಾಚಾರದ ತನಿಖೆ ಮಾಡಿಸಿ, ಸರ್ಕಾರ ಮಾಡಿದ ಖರ್ಚಿನ ಶ್ವೇತಪತ್ರ ಹೊರಡಿಸಿ. ಕಳೆದ ಹಲವು ವರ್ಷದಲ್ಲಿ ನಡೆದ ಭ್ರಷ್ಟಾಚಾರದ ತನಿಖೆ ನಡೆಸಿ. ನಾವು ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ. ನಿಮ್ಮ ಸಂಪುಟದ ಸಚಿವರು 500-600 ಪಟ್ಟು ದೊಡ್ಡ ಭ್ರಷ್ಟಾಚಾರ ಮಾಡಿದ್ದಾರೆ. ಯಾವುದಕ್ಕೂ ಲೆಕ್ಕ ಇಲ್ಲ. ದೇಶಕ್ಕೆ ದೊಡ್ಡ ಕೋವಿಡ್ ಕೇಂದ್ರವನ್ನು ನಗರದಲ್ಲಿ ಮಾಡಿದ್ದೇವೆ ಎನ್ನುತ್ತೀರಿ. ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ 10 ಸಾವಿರ ಹಾಸಿಗೆ ಇದೆ ಎನ್ನುತ್ತೀರಿ. ಅಧಿಕಾರಿಗಳು 6 ಸಾವಿರ ಹಾಸಿಗೆ ಎನ್ನುತ್ತಾರೆ, ಸರಿಯಾದ ಉತ್ತರ ಕೊಡಿ. ವಿಧವಾ, ವೃದ್ಧಾಪ್ಯ ವೇತನ ನಿಲ್ಲಿಸಿದ್ದೀರಿ. ಇದಕ್ಕೆ ಉತ್ತರ ಕೊಡಿ ಎಂದರು.
ಕೇಂದ್ರ, ರಾಜ್ಯದಲ್ಲಿ ಒಂದೇ ಸರ್ಕಾರ ಇದೆ, ಯಾಕೆ ರಾಜ್ಯ ಅಭಿವೃದ್ಧಿಯಾಗಿಲ್ಲ? ನಿಮ್ಮ ಸಾಧನೆ ಎಂದರೆ ನಮ್ಮ ಸರ್ಕಾರದ ಯೋಜನೆಗಳನ್ನು ರದ್ದು ಮಾಡುವುದು. ನಿಮ್ಮ ಸಚಿವರಲ್ಲಿ ಹೊಂದಾಣಿಕೆ ಇಲ್ಲ. ಮನಸ್ಸಿಗೆ ಬಂದ ಬೆಲೆಗೆ ಮಾಸ್ಕ್, ಸ್ಯಾನಿಟೈಸರ್ ಖರೀದಿಸಿದ್ದಾರೆ. ವಿವಿಧ ಇಲಾಖೆಗಳು ಒಂದೊಂದು ಬೆಲೆಗೆ ಖರೀದಿ ಮಾಡಿವೆ. ಇದಕ್ಕೆ ನಾವು ಸಹಕಾರ ಕೊಡಬೇಕಾ? ಇದು ಸರ್ಕಾರದ ವರ್ಷದ ಸಾಧನೆ. ನಿಮ್ಮ ಮರ್ಯಾದೆ ದೇಶದಲ್ಲಿ ಬೆತ್ತಲಾಗಿದೆ. ಜನ ಬೆಂಗಳೂರು ಬಿಟ್ಟು ಹಳ್ಳಿ ಸೇರಿದ್ದಾರೆ. ಉದ್ಯಮಿಗಳು ಬೇರೆ ರಾಜ್ಯಕ್ಕೆ ತೆರಳಿದ್ದಾರೆ. ರಾಜ್ಯ ಮತ್ತು ಬೆಂಗಳೂರಿನಲ್ಲಿ ಅಭಿವೃದ್ಧಿ ಮಾಡಲು ಬಂದವರಿಗೆ ರಕ್ಷಣೆ ಕೊಡಲಿಲ್ಲ. ನಿರ್ದೇಶನ ಇಲ್ಲದೆ ಯಾರಿಗೂ ಮಾರ್ಗದರ್ಶನ ನೀಡದ ಸರ್ಕಾರ ಇದಾಗಿದೆ. ರಾಜ್ಯ ಸರ್ಕಾರದ ಸಾಧನೆಯ ಪುಸ್ತಕ ನೋಡಿದಾಗ ನಾಚಿಕೆಯಾಯಿತು. ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪ್ರಧಾನಿ ಮಧ್ಯಪ್ರವೇಶಿಸಿ ಒಟ್ಟಾರೆ ಅವ್ಯವಹಾರದ ಕುರಿತು ಸ್ಪಷ್ಟನೆ ನೀಡಲಿ. 21 ದಿನವಲ್ಲ 120 ದಿನವಾದರೂ ಕೊರೊನಾ ನರಕಯಾತನೆ ನಿಂತಿಲ್ಲ. ವರ್ಷದ ಸಾಧನೆ ದೊಡ್ಡ ಸೊನ್ನೆ ಎಂದರು.
ಸೂತಕದಲ್ಲಿ ಸಂಭ್ರಮಾಚರಣೆ:
ರಾಜ್ಯ ಸರ್ಕಾರದ ವರ್ಷದ ಸಾಧನೆ ಸೂತಕದಲ್ಲಿ ಸಂಭ್ರಮಾಚರಣೆ ಆಗಿದೆ. ಜನರಿಗೆ ಮಾಡಿದ ಸಾಧನೆಯ ವಿವರ ನೀಡಿ. ಪರಿಹಾರ ತಲುಪಿಸಿದವರ ವಿವರ ನೀಡಿ. ಶೂನ್ಯ, ಸುಳ್ಳಿನ ವಿವರ ಯಾಕೆ ನೀಡುತ್ತೀರಿ. ರಾಜ್ಯ ಕತ್ತಲಲ್ಲಿದೆ, ಸಾವು ನೋವು ಹೆಚ್ಚಾಗಿದೆ. 33 ರಾಜಕೀಯ ಜಿಲ್ಲೆಗಳಲ್ಲಿ ನಮ್ಮ ಪಕ್ಷದ ಹಿರಿಯ ನಾಯಕರು ಜು. 29ರಿಂದ ಆ. 2ರವರೆಗೆ ರಾಜ್ಯ ಸುತ್ತಿ ಸರ್ಕಾರದ ಭ್ರಷ್ಟಾಚಾರ ವಿವರಿಸುವ ಭಾಷಣ ಮಾಡಲಿದ್ದಾರೆ. ಸರ್ಕಾರದ ಅನಾಚಾರವನ್ನು ವಿವರಿಸುವ ಕಾರ್ಯ ಮಾಡಲಿದ್ದೇವೆ ಎಂದರು.
ನೆರೆ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಪ್ರವಾಹದ ಹಾನಿ ಸುಮಾರು 30 ಸಾವಿರ ಕೋಟಿ ಆಗಿತ್ತು. ಆದರೆ ಕೇಂದ್ರ ಕೊಟ್ಟಿದ್ದು ಎಷ್ಟು? ಅಮಿತ್ ಶಾ ಬಳಿ 5 ಸಾವಿರ ಕೋಟಿ ಪರಿಹಾರ ಕೇಳಿದ್ರು. ಹತ್ತೇ ನಿಮಿಷಗಳಲ್ಲಿ ಯಡಿಯೂರಪ್ಪ-ಅಮಿತ್ ಶಾ ಭೇಟಿ ಮುಕ್ತಾಯವಾಯಿತು. ಕೊರೊನಾ ಸಂದರ್ಭದಲ್ಲಿ ಘೋಷಣೆ ಮಾಡಿದ ಪರಿಹಾರ ಸಹ ಕೊಡಲಿಲ್ಲ. ರೈತರಿಗೆ ಸಾವಿರಾರು ಕೋಟಿ ನಷ್ಟವಾಗಿದೆ. ರೈತರಿಗೆ ಕೊಟ್ಟ ಪರಿಹಾರದ ಬಗ್ಗೆ ಪತ್ರ ಬಿಡುಗಡೆ ಮಾಡಿ. ನಿಮ್ಮ ಭ್ರಷ್ಟಾಚಾರಕ್ಕೆ ಬೆಂಬಲ ಕೊಡಬೇಕಾ? ಶೇ. 10ರ ಸರ್ಕಾರ ಅಂತ ಟೀಕೆ ಮಾಡಿದ್ರಿ. ಈಗ ನೂರಾರು ಪಟ್ಟು ಜಾಸ್ತಿ ಹಣ ಕೊಟ್ಟು ವೈದ್ಯಕೀಯ ಉಪಕರಣಗಳನ್ನು ಖರೀದಿ ಮಾಡಿದ್ದೀರಿ. ಇದನ್ನು ತನಿಖೆಗೆ ಕೊಡಿ. ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಅಂತ ಹೇಳ್ತಿದ್ದೀರಿ. ಅದನ್ನೂ ತನಿಖೆ ನಡೆಸಿ, ಬೇಡ ಅಂದವರು ಯಾರು ಎಂದರು.