ಬೆಂಗಳೂರು : ಜನ ಇದ್ದರೆ ಜೀವನ, ಜನರಿದ್ದರೆ ರಾಜ್ಯ, ಜನರಿದ್ದರೆ ಮಾತ್ರ ಆರ್ಥಿಕತೆ. ಮೊದಲು ಜನರನ್ನ ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನರ ಜೀವದ ಜೊತೆ ಕೇಂದ್ರ, ರಾಜ್ಯ ಸರ್ಕಾರಗಳು ಚೆಲ್ಲಾಟವಾಡ್ತಿವೆ. ಗಂಟೆ ಹೊಡೆಯಿರಿ ಅಂದ್ರು ಗಂಟೆ ಹೊಡೆದ್ವಿ. ದೀಪ ಹಚ್ಚಿ ಅಂದ್ರು ದೀಪ ಹಚ್ಚಿದ್ದೆವು. ಚಪ್ಪಾಳೆ ಹೊಡೆಯಿರಿ ಅಂದ್ರು ಚಪ್ಪಾಳೆಯನ್ನೂ ಹೊಡೆದ್ವಿ. ಲಾಕ್‌ಡೌನ್ ಮಾಡಿದ್ರೂ ಫಾಲೋ ಮಾಡಿದ್ವಿ. ಇಷ್ಟೆಲ್ಲವಾದ್ರೂ ನಿಯಂತ್ರಣ ಮಾಡೋಕೆ ಆಗ್ತಿಲ್ಲ. ನಾವು ಬದುಕ್ತೇವೋ ಇಲ್ವೋ ಎಂಬ ಆತಂಕ ಜನರಿಗಿದೆ ಎಂದರು.
ಜನರ ಆತಂಕವನ್ನ ಸರ್ಕಾರ ಹೇಗೆ ನಿರ್ವಹಿಸಬೇಕು. ಒಂದು ವರ್ಷ ಸರ್ಕಾರಕ್ಕೆ ಸಹಕಾರ ಕೊಟ್ಟಿದ್ದೇವೆ. ಈಗ ಕೈಮೀರಿ ಹೋಗಿದೆ ಅಂತ ಆರೋಗ್ಯ ಸಚಿವರು ಹೇಳ್ತಿದ್ದಾರೆ. ಇವತ್ತಿನ ಪರಿಸ್ಥಿತಿ ನೆನೆದರೆ ಏನಾಗಬೇಡ. ಸರ್ಕಾರ ಇದ್ಯೋ ಇಲ್ವೋ ಗೊತ್ತಾಗ್ತಿಲ್ಲ ಎಂದರು.
ಇವರಿಗೆ ಯಾವುದೇ ಪ್ಲಾನ್ ಇಲ್ಲ : ಅತಿ ಹೆಚ್ಚು ಆಸ್ಪತ್ರೆ ನಮ್ಮ ರಾಜ್ಯದಲ್ಲಿವೆ. ದೇಶದಲ್ಲೇ ತಜ್ಞ ವೈದ್ಯರು ನಮ್ಮಲ್ಲಿದ್ದಾರೆ. ಆದರೂ ಸರ್ಕಾರ ಕೈಚೆಲ್ಲಿ ಕೂತಿದೆ. ರೆಮಿಡಿಸೀವರ್ ಇಂಜೆಕ್ಷನ್ ಸಿಗ್ತಿಲ್ಲ. ಆಸ್ಪತ್ರೆಗಳಲ್ಲಿ ಹಾಸಿಗೆಗಳು ಸಿಗ್ತಿಲ್ಲ. ಅಧಿಕಾರಿಗಳು ಏನು ಮಾಡ್ತಿದ್ದಾರೆ. ಆಸ್ಪತ್ರೆಗಳಿಗೆ ಎಷ್ಟು ಅಧಿಕಾರಿಗಳು ಭೇಟಿ ಮಾಡಿದ್ದಾರೆ. ಸಚಿವರು ರಾಜ್ಯದ ಎಷ್ಟು ಕಡೆ ಭೇಟಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಚುನಾವಣೆಯೇ ಇವರಿಗೆ ಮುಖ್ಯ : ಚಾಲಕರು, ಸಮುದಾಯಕ್ಕೆ ಯಾವ ಪರಿಹಾರ ಕೊಟ್ಟಿದ್ದೀರ. ಸರ್ಕಾರದಿಂದ ನಯಾ ಪೈಸೆ ಸಹಾಯ ಮಾಡಿಲ್ಲ. ಜಿಮ್ಗಳು ನಿಂತು ಹೋಗಿವೆ. ವ್ಯಾಪಾರ ಬಿದ್ದು ಹೋಗ್ತಿದೆ. ಜನರ ಆರೋಗ್ಯ ಹದಗೆಡುತ್ತಿದೆ. ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಿಗೆ ಆತಂಕವಾಗಿದೆ. ಸರ್ಕಾರ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ಯಾ? ಕೋವಿಡ್ಗೆ ಉಚಿತ ಚಿಕಿತ್ಸೆ ಕಲ್ಪಿಸಿ. ಜನರ ಆರೋಗ್ಯ ಪ್ರಧಾನಿಯವರಿಗೆ ಬೇಕಿಲ್ಲ. ವೋಟ್ ಕೊಡಿ ಅಂತ ಪ್ರಚಾರಕ್ಕೆ ಒತ್ತು ಕೊಡ್ತಾರೆ. ಚುನಾವಣೆಯೇ ಇವರಿಗೆ ಮುಖ್ಯವಾಗಿದೆ ಎಂದು ಹೇಳಿದರು.
20 ಲಕ್ಷ ಕೋಟಿ ಹಣ ಯಾರಿಗೆ ಸಿಕ್ಕಿದೆ?: 20 ಲಕ್ಷ ಕೋಟಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. Rವರೆಗೆ ಯಾರಿಗೆ ಆ ಹಣ ಸಿಕ್ಕಿದೆ. ಜಿಎಸ್ಟಿ ಕಟ್ಟುವ ದುಡ್ಡಿಗೂ ಪೆನಾಲ್ಟಿ ಹಾಕ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಸಿಮೆಂಟ್, ಗೊಬ್ಬರದ ಬೆಲೆ ಗಗನಕ್ಕೇರಿದೆ. ರೈತರು ಇವತ್ತು ಪರದಾಡುತ್ತಿದ್ದಾರೆ. ಹೆಣ್ಣುಮಕ್ಕಳು ಉದ್ಯೋಗ ಕಳೆದುಕೊಂಡಿದ್ದಾರೆ. ಅವರಿಗೆ ಯಾವ ಸಹಾಯಧನ ಸರ್ಕಾರ ನೀಡ್ತಿದೆ. ಸರ್ಕಾರ ಜನರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕು. ಸರಿಯಾದ ಮಾರ್ಗಸೂಚಿಗಳನ್ನ ತರಬೇಕು. ಶಿಕ್ಷಣ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದು ವಾಗ್ದಾಳಿ ನಡೆಸಿದರು.
ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಲು ಸರ್ಕಾರ ಹೊರಟಿದೆ : ಇಲಾಖೆಗಳ ಅಧಿಕಾರಿಗಳನ್ನ ಬಳಸಿಕೊಳ್ಳಿ. ಕೋವಿಡ್ ನಿಯಂತ್ರಣಕ್ಕೆ ಅವರನ್ನ ಬಳಸಿಕೊಳ್ಳಿ. ಅಭಿವೃದ್ಧಿ ಕೆಲಸ ನಿಲ್ಲಿಸಿ, ಆರೋಗ್ಯಕ್ಕೆ ಒತ್ತು ಕೊಡಿ. ಕೋವಿಡ್ಗೆ ಸದ್ಯಕ್ಕೆ 300 ಕೋಟಿ ಹಣ ಮೀಸಲಿಡಿ. ಹೆಣ ಸುಡುವವರಿಗೆ ವೇತನ ಕೊಡ್ತಿಲ್ಲ. ಹೆಣ ಸುಡೋದಕೂ ಕ್ಯೂ ನಿಲ್ಲಬೇಕಾಗಿದೆ. ಹೆಣ ಹೂಳಲು ಜಾಗವಿಲ್ಲ. ಕಂದಾಯ ಭೂಮಿಯನ್ನ ಗುರ್ತಿಸಿ ಅವಕಾಶ ಮಾಡಿ ಕೊಡಿ. ಉದ್ಯೋಗ ಕಳೆದುಕೊಂಡವರ ಬಗ್ಗೆ ಸರಿಯಾದ ಡಾಟಾ ಸರ್ಕಾರಕ್ಕೆ ಇಲ್ಲ. ಸರ್ಕಾರ ಇನ್ನೇನು ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಲಾಕ್ಡೌನ್ಗೆ ವಿರೋಧ : ಲಾಕ್ಡೌನ್ಗೆ ನಮ್ಮ ವಿರೋಧವಿದೆ. ಜೀವ ಉಳಿಯಬೇಕು, ಬದುಕು ಇರಬೇಕು. ನಾಳೆ ಬೆಂಗಳೂರು ಜನಪ್ರತಿನಿಧಿಗಳ ಸಭೆ ವಿಚಾರ ಮಾತನಾಡಿ, ನಮ್ಮವರೂ ಭಾಗವಹಿಸ್ತಾರೆ, ಸಲಹೆ ಕೊಡ್ತಾರೆ. ಆದರೆ, ಏನೇನು ಮಾತನಾಡಬೇಕು ಅಲ್ಲಿ ಹೇಳ್ತಾರೆ. ಲಾಕ್ಡೌನ್ನಿಂದ ಏನು ಪ್ರಯೋಜನ. ರಾತ್ರಿ ಮಾಡಿದ್ರೆ ಮಾತ್ರ ಉಪಯೋಗವಾಗುತ್ತೆ. ಹಗಲು ಹೊತ್ತು ಕೊರೊನಾ ಬರಲ್ವಾ? ಜನರ ಜೀವದ ಜೊತೆ ಬದುಕು ಮುಖ್ಯ. ಅದಕ್ಕೆ ನಾವು ಲಾಕ್ಡೌನ್ಗೆ ವಿರೋಧವಿದ್ದೇವೆ ಎಂದರು.
ಅಧಿಕಾರಿಗಳನ್ನ ಕೇಳಿದ್ರೆ ನಮಗೇನು ಡೈರೆಕ್ಷನ್ ಇಲ್ಲ ಅಂತಾರೆ. ಅವರು ವೇತನ ಪಡೆಯುತ್ತಿಲ್ವಾ? ಬರೀ ಮೀಟಿಂಗ್ ಮಾಡಿದರೆ ಸಾಲದು. ಜನರನ್ನ ಬದುಕಿಸುವ ಕೆಲಸ ಮಾಡಲಿ. ಸರ್ಕಾರ ಅಧಿಕಾರಿಗಳಿಗೆ ನಿರ್ದೇಶನ ಕೊಡಬೇಕು. ಸಿಎಂ ಒಬ್ಬರೇ ಅಲ್ಲ, ಸರ್ಕಾರ ಎಲ್ಲ ತಂಡ, ಸಚಿವರು ಸರ್ಕಾರ.
ವ್ಯಾಕ್ಸಿನ್ ಕಾಳಸಂತೆಯಲ್ಲಿ ಮಾರಾಟ ಮಾಡ್ತಿದ್ದಾರೆ. ಜಿಪಂ,ತಾಪಂ ಚುನಾವಣೆ ನಡೆಸೋಕೆ ಹೊರಟಿದ್ದಾರೆ. ಒಂದಾರು ತಿಂಗಳು ಚುನಾವಣೆ ಮುಂದಕ್ಕೆ ಹಾಕಲಿ. ಇಂತಹ ಸಂದರ್ಭದಲ್ಲೂ ಚುನಾವಣೆಗಳು ಬೇಕಾ?ಪಶ್ಚಿಮ ಬಂಗಾಳದಲ್ಲಿ ಆರು ಫೇಸ್ ಎಲೆಕ್ಷನ್ ಬೇಕಾ? ಇವರಿಗೆ ಜನರ ಜೀವಕ್ಕಿಂತ ಚುನಾವಣೆ ಮುಖ್ಯವೇ? ಎಂದು ಪ್ರಶ್ನಿಸಿದ್ರು.