ಬೆಂಗಳೂರು: ಕಳೆದೊಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ರಾಜಾಜಿನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಿವಾಸಕ್ಕೆ ವಾಪಸಾಗಿದ್ದ ಶಿವಕುಮಾರ್ ಅವರಿಗೆ ಎರಡು ದಿನಗಳ ತರುವಾಯ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕಳೆದವಾರ ಜಯನಗರ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಸಂಪೂರ್ಣ ಗುಣಮುಖರಾಗಿರುವ ಅವರು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡು ನಿವಾಸಕ್ಕೆ ವಾಪಸಾಗಿದ್ದಾರೆ.
ಮುಂದಿನ ಕೆಲ ದಿನ ಅವರು ನಿವಾಸದಲ್ಲಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದು, ಜ್ವರ ಕಡಿಮೆಯಾಗಿದ್ದರೂ ಸುಸ್ತು ಹಾಗೂ ಬೆನ್ನು ನೋವಿನ ಸಮಸ್ಯೆ ಅವರನ್ನು ಕಾಡುತ್ತಿದೆ. ಇದಕ್ಕಾಗಿ ಅವರು ಅನಿವಾರ್ಯವಾಗಿ ವಿಶ್ರಾಂತಿ ಪಡೆಯಲೇಬೇಕಾಗಿದೆ.
ಪಕ್ಷ ಸಂಘಟನೆ ಹಾಗೂ ಪಕ್ಷದ ವಿವಿಧ ಪ್ರಮುಖ ಕಾರ್ಯಕ್ರಮಗಳ ಜವಾಬ್ದಾರಿಯನ್ನು ಮೂವರು ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ಹಂಚಿಕೆ ಮಾಡಿರುವ ಡಿಕೆಶಿ, ಮುಂದಿನ ದಿನ ವಿಶ್ರಾಂತಿ ಪಡೆಯಲಿದ್ದಾರೆ. ಮುಂದಿನ ಒಂದೆರಡು ವಾರಗಳ ವಿಶ್ರಾಂತಿಯ ಬಳಿಕ ಅವರು ಸಕ್ರಿಯ ಕಾರ್ಯಚಟುವಟಿಕೆಗೆ ವಾಪಸ್ ಆಗುವ ನಿರೀಕ್ಷೆ ಹೊಂದಲಾಗಿದೆ.