ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ರೋಗಿಗಳ ಆರೋಗ್ಯ ವಿಚಾರಿಸಿದರು.
ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ್ದ ಅವರು, ರೋಗಿಗಳು, ವೈದ್ಯರು ಹಾಗೂ ದಾದಿಯರ ಯೋಗಕ್ಷೇಮ ವಿಚಾರಿಸಿದರು. ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ ವಿಧಾನ ಹಾಗೂ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಕೈಗೊಳ್ಳುತ್ತಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮತ್ತು ಸರ್ಕಾರದಿಂದ ಸಿಗುತ್ತಿರುವ ಸೌಲಭ್ಯಗಳು, ಸಹಕಾರದ ಕುರಿತು ಮಾಹಿತಿ ಪಡೆದರು.
![DK Shivakumar visited Victoria Hospital](https://etvbharatimages.akamaized.net/etvbharat/prod-images/kn-bng-02-dks-hospital-visit-script-7208077_15072020125729_1507f_1594798049_767.jpg)
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾಲ್ಕು ದಿನದ ಮಗುವಿನಿಂದ ಹಿಡಿದು 90 ವರ್ಷದ ವಯೋವೃದ್ಧರೂ ಸಹ ವಿಕ್ಟೋರಿಯಾಕ್ಕೆ ಬಂದು ಗುಣಮುಖರಾಗಿ ಹೋದ ಉದಾಹರಣೆಯಿದೆ. ಈ ಆಸ್ಪತ್ರೆಯಿಂದ ಗುಣಮುಖರಾಗಿ ಹೋದವರಲ್ಲಿ ಅನೇಕರು ಇತರೆ ರೋಗಿಗಳಿಗೆ ಸಹಾಯ ಮಾಡಲು ಮುಂದಾಗಿರುವ ಬಗ್ಗೆ ಆಸ್ಪತ್ರೆಯವರು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.
ಕೊರೊನಾದಿಂದ ನಾವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದರೊಂದಿಗೆ ಬದುಕಬೇಕಿದೆ. ಸೋಂಕಿತರಿಗೆ ಆತ್ಮವಿಶ್ವಾಸ, ಮನೋಸ್ಥೈರ್ಯ ತುಂಬಿದರೆ ಅರ್ಧ ರೋಗವೇ ವಾಸಿಯಾದಂತಾಗುತ್ತದೆ. ವಿಕ್ಟೋರಿಯಾದಲ್ಲಿ ತಾವು ತಪ್ಪು ಕಂಡುಹಿಡಿಯುವುದಕ್ಕೋ ಅಥವಾ ಆರೋಪ ಮಾಡುವುಕ್ಕಾಗಿ ಭೇಟಿ ಕೊಟ್ಟಿಲ್ಲ. ತಪ್ಪನ್ನೇ ಕಂಡು ಹಿಡಿಯಬೇಕೆಂದರೆ ನಮ್ಮಲ್ಲೂ, ನಿಮ್ಮಲ್ಲೂ ಎಲ್ಲರಲ್ಲಿಯೂ ತಪ್ಪು ಕಂಡು ಹಿಡಿಯಬಹುದು. ತಪ್ಪು ಕಂಡು ಹಿಡಿಯಲು ಬೇರೆ ಬೇರೆ ವಿಚಾರಗಳಿವೆ ಎಂದು ಹೇಳಿದರು.
ಕೊರೊನಾ ಸೋಂಕಿತರ ಸೇವೆ ಮಾಡುವುದು ಅಷ್ಟು ಸುಲಭವಾದ ಕೆಲಸವೂ ಅಲ್ಲ. ಎಲ್ಲರೂ ಮಾನಸಿಕರಾಗಿ ಸಿದ್ಧರಿರಬೇಕು. ವೈದ್ಯಕೀಯ ಸಿಬ್ಬಂದಿಯೂ ಸಹ ಮನೋಸ್ಥೈರ್ಯದಿಂದಿರಬೇಕು. ಇದು ಅಷ್ಟು ಸುಲಭದ ಕೆಲಸವೂ ಅಲ್ಲ. ಆರೋಪ ಮಾಡುವುದನ್ನು ಬಿಟ್ಟು ಧೈರ್ಯ ತುಂಬುವ, ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಬೇಕೆಂದು ಎಂದರು.
ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಅನೇಕ ಶಾಸಕರು ಸಾಥ್ ನೀಡಿದರು.