ಬೆಂಗಳೂರು : ಪಿಎಸ್ಐ ಅಕ್ರಮ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಎಡಿಜಿಪಿ ಅಮೃತ ಪೌಲ್ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಅವರ ಬಂಧನದ ಬೆನ್ನಲ್ಲೇ ಈ ಕೂಡಲೇ ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಒಬ್ಬ ಐಪಿಎಸ್ ಅಧಿಕಾರಿಯನ್ನು ಬಂಧಿಸಲಾಗಿದೆ. ಗೃಹ ಸಚಿವರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಈ ಹಿಂದೆಯೇ ಹೇಳಿದ್ದೇವೆ. ಬಾಳೆಹಣ್ಣು ತಿಂದವರನ್ನು ಮಾತ್ರ ಹಿಡಿದಿದ್ದಾರೆ. ಬಾಳೆ ಹಣ್ಣು ಮಾರಿದವರನ್ನು, ಬಾಳೆ ಹಣ್ಣು ಕೊಟ್ಟವರನ್ನು ಹಿಡಿಯಬೇಕು. ಇಂದೇ ಗೃಹ ಸಚಿವರು ರಾಜೀನಾಮೆ ಕೊಡುತ್ತಾರೆ ಎಂದುಕೊಂಡಿದ್ದೇನೆ. ಈ ಬಗ್ಗೆ ನಾಳೆ ಶಾಸಕಾಂಗ ಪಕ್ಷದ ನಾಯಕರೊಂದಿಗೆ ವಿವರವಾಗಿ ಮಾತನಾಡುತ್ತೇನೆ ಎಂದು ಹೇಳಿದರು.
ಪ್ರಕರಣ ಸಂಬಂಧ ಎಡಿಜಿಪಿ ಅಮೃತ್ ಪೌಲ್ ಅವರನ್ನು ಬಂಧಿಸಲಾಗಿದೆ. ಗೃಹ ಸಚಿವರೇ ಇದನ್ನು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ನಾನು ಹಾಗೂ ಸಿದ್ದರಾಮಯ್ಯ ನಾಳೆ ವಿವರವಾಗಿ ಮಾತನಾಡಲಿದ್ದೇವೆ. ಇದು ಕೇವಲ ಪಿಎಸ್ಐ ನೇಮಕಾತಿ ಅಕ್ರಮ ಮಾತ್ರವಲ್ಲ, ಎಲ್ಲ ನೇಮಕಾತಿಗಳಲ್ಲಿಯೂ ಹೀಗಿಯೇ ಆಗಿದೆ. ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರನ್ನು ಬಂಧಿಸಬೇಕು. ಗೃಹ ಸಚಿವರು ವಿಧಾನಸಭೆಯಲ್ಲಿ ಅಕ್ರಮ ನಡೆದಿಲ್ಲ ಎಂದು ಹೇಳಿದ್ದರು. ಆದ್ದರಿಂದ ತಕ್ಷಣ ಗೃಹ ಸಚಿವರು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಓದಿ : ಪಿಎಸ್ಐ ಹಗರಣ: ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದ ಅಶ್ವತ್ಥ ನಾರಾಯಣ