ಬೆಂಗಳೂರು: ಕಾಂಗ್ರೆಸ್ ಇಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು. ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ವರಗೂ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು, ರೈತರು ಫ್ರೀಡಂ ಪಾರ್ಕ್ನಲ್ಲಿ ಸಮಾವೇಶ ನಡೆಸಿದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯಕ್ಕೆ ಕೊರೊನಾ ಸಂದರ್ಭದಲ್ಲಿ ಸಮಸ್ಯೆ ಆಗಿದೆ. ರೈತರಿಗೆ ಬೆಂಬಲ ಕೊಡಲು, ಜನರಿಗೆ ಸಹಾಯ ಮಾಡಲು ಆಗಿಲ್ಲ. ಚಾಲಕರಿಗೆ ಸಹಾಯಧನ ನೀಡಿಲ್ಲ. ರೈತರಿಗೆ ಪೂರಕವಾದ ಯಾವ ಸಹಾಯವನ್ನೂ ಸರ್ಕಾರ ಮಾಡಿಲ್ಲ. ಸಿಎಂ ಯಾರಿಗೆ ಸಹಾಯ ಮಾಡಿದ್ದಾರೆ ಎಂದು ತಿಳಿಸಲಿ. ರಾಜ್ಯ ಮತ್ತು ಕೇಂದ್ರ ಸರ್ಕಾರ ಜಾಹೀರಾತು ನೀಡಲಿ. ಯಾವ ಜನರಿಗೆ ಎಷ್ಟು ಸಹಾಯ ಸಿಕ್ಕಿದೆಯಂತ ಹೇಳಲಿ ಎಂದು ಸವಾಲು ಹಾಕಿದರು.
ಇದೊಂದು ಅಪೂರ್ವ ದಿನ. ರೈತರಿಗೆ ಈ ದಿನ ವಿಶೇಷವಾದುದು. ರೈತರ ಬದುಕನ್ನು ಹಸನಾಗಿಸುವ ದಿನವಾಗಿದೆ. ಇದು ಕಾಂಗ್ರೆಸ್ ಅಥವಾ ಡಿ.ಕೆ.ಶಿವಕುಮಾರ್ ಕಾರ್ಯಕ್ರಮವಲ್ಲ. ಬದಲಾಗಿ ರಾಷ್ಟ್ರದ, ರಾಜ್ಯದ ರೈತರ ಕಾರ್ಯಕ್ರಮ. ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಅನ್ನದಾತರ ಪರವಾಗಿ ನಿಂತು ಹೋರಾಟ ಮಾಡುವ ದಿನ ಎಂದರು.
ಇಲ್ಲಿ ಒಂದಿಂಚು ಜಾಗವಿಲ್ಲದಂತೆ ಇಂದು ಪ್ರತಿಭಟನೆ ನಡೆದಿದ್ದು, ರೈತರ ನೋವನ್ನು ರಾಷ್ಟ್ರಪತಿಗಳಿಗೆ, ಪ್ರಧಾನಿಗಳಿಗೆ ತಿಳಿಸಲು ಈ ಕಾರ್ಯಕ್ರಮ ಅನುವಾಗಿದೆ. ಕಳೆದ ಮೂರು ತಿಂಗಳಿನಿಂದ ರೈತರಿಗೆ ಆಗುತ್ತಿರುವ ಅನ್ಯಾಯ ವಿರೋಧಿಸಿ ರೈತರು ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ಅವರ ನೋವನ್ನು ಆಲಿಸಲು ಇಂದು ಜೊತೆಯಾಗಿದೆ ಎಂದು ಹೇಳಿದರು.
ರೈತರಿಗೆ ಸಂಬಳ, ಪ್ರಮೋಷನ್ ಇಲ್ಲ. ರೈತರ ಧ್ವನಿಯನ್ನು ಕೇಂದ್ರಕ್ಕೆ ತಲುಪಿಸಬೇಕು. ಅದಕ್ಕಾಗಿ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ರಾಜ್ಯದ ಜನರ ಪರವಾಗಿ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಇಲ್ಲಿರುವ ನಾಯಕರ ಪ್ರತಿಭಟನೆ ಅಲ್ಲ ಇದು. ಸಾವಿರಾರು ಜನ ಬಿಸಿಲಲ್ಲಿ ನಡೆದು ಬಂದಿದ್ದಾರೆ. ಇದು ಅನ್ನದಾತನಿಗೆ ಕೊಟ್ಟ ಶಕ್ತಿ. ನಮ್ಮ ನಾಯಕರು ತ್ಯಾಗಕ್ಕೆ ಗೌರವ ಕೊಟ್ಟಿದ್ದಾರೆ. ಎಲ್ಲ ನಾಯಕರ ಜೊತೆ ಚರ್ಚೆ ಮಾಡಿ ಹೋರಾಟ ಮಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ:ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಬಲ ಪ್ರದರ್ಶಿಸಿದ್ರೇ ಶಾಸಕಿ ಸೌಮ್ಯರೆಡ್ಡಿ!?
ನಾವು ಹಿಂದೆಯೇ ಹೇಳಿದ್ದೆವು. ಈ ವರ್ಷ ಹೋರಾಟದ ವರ್ಷ ಅಂತ. ನಾವು ರೂಮ್ನಲ್ಲಿ ಕುಳಿತು ಸಭೆ ನಡೆಸಲ್ಲ. ಹೋರಾಟಗಳ ಮೂಲಕ ಜನರ ಧ್ವನಿಯಾಗಬೇಕು ಎಂದು ಹೋರಾಟ ರೂಪಿಸಲಾಗಿದೆ. ತಾಲೂಕುಮಟ್ಟ, ಜಿಲ್ಲಾಮಟ್ಟದಲ್ಲೂ ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದರು.