ಬೆಂಗಳೂರು: ಕಾಂಗ್ರೆಸ್ ಪಕ್ಷದ ಎಲ್ಲ ಹಿರಿಯ ನಾಯಕರ ಸಭೆ ಕರೆದು ಪಕ್ಷ ಹಾಗೂ ರಾಜ್ಯ ಸರ್ಕಾರದ ಆಗು-ಹೋಗುಗಳ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ನಿನ್ನೆ ರಾತ್ರಿ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ದೇಶದಲ್ಲಿ ರಾಷ್ಟ್ರಧ್ವಜಕ್ಕೆ ಆಗುತ್ತಿರುವ ಅಪಮಾನ, ರಾಷ್ಟ್ರಧ್ವಜದ ಬಗ್ಗೆ ಬಿಜೆಪಿ ನಾಯಕರು, ಸಚಿವರು ಆಡಿರುವ ಮಾತಿನ ಬಗ್ಗೆ ಜನರು ಬಹಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಸರ್ಕಾರ ಇದುವರೆಗೂ ಸಚಿವರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿಲ್ಲ. ಅವರ ರಾಜೀನಾಮೆ ಪಡೆದಿಲ್ಲ. ರಾಜ್ಯಪಾಲರು ಸಚಿವರನ್ನು ವಜಾ ಮಾಡಬೇಕಿತ್ತು ಅಥವಾ ಮುಖ್ಯಮಂತ್ರಿಗಳು ಅವರ ರಾಜೀನಾಮೆ ಪಡೆಯಬೇಕಿತ್ತು. ಇವೆರಡೂ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಯೊಂದು ಜಾತಿ, ಧರ್ಮಕ್ಕೂ ಅವರದ್ದೇ ಆದ ಉಡುಗೆ, ತೊಡುಗೆಗೆ ಸಂವಿಧಾನದಲ್ಲಿ ಹಕ್ಕು ನೀಡಲಾಗಿದೆ. ಫೆ.5 ಕ್ಕೂ ಮುನ್ನ ರಾಜ್ಯದಲ್ಲಿ ಸಮವಸ್ತ್ರ ಕುರಿತ ಕಾನೂನು ಇತ್ತು. ಆದರೆ 5 ರ ನಂತರ ಬದಲಾವಣೆ ಮಾಡಿ ಗೊಂದಲ ಸೃಷ್ಟಿಸಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಕ್ಕಳನ್ನು ತಪ್ಪು ದಾರಿಗೆ ಎಳೆಯುವ, ಅವರ ವಿದ್ಯಾಭ್ಯಾಸಕ್ಕೆ ತೊಂದರೆ ಮಾಡುವ ಪ್ರಯತ್ನ ನಡೆದಿದೆ. ನಮ್ಮ ಆದ್ಯತೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು, ದೇಶದಲ್ಲಿ ಐಕ್ಯತೆ, ಸಮಗ್ರತೆ, ಶಾಂತಿ ಕಾಪಾಡಬೇಕು ಎಂಬುದಾಗಿದೆ. ಕಾಂಗ್ರೆಸ್ ಈ ಜವಾಬ್ದಾರಿ ತೆಗೆದುಕೊಂಡು, ನೊಂದ ಸಮುದಾಯಕ್ಕೆ ಧ್ವನಿಯಾಗಿ ನಿಲ್ಲಲಿದೆ. ಎಲ್ಲ ಧರ್ಮದವರಿಗೂ ಅವರ ಧರ್ಮ ರಕ್ಷಣೆಗೆ ಅವಕಾಶ ನೀಡಬೇಕು ಎಂಬುದು ಕಾಂಗ್ರೆಸ್ನ ಸ್ಪಷ್ಟ ನಿಲುವು ಎಂದರು.
ಮೇಕೆದಾಟು ಪಾದಯಾತ್ರೆ ದಿನಾಂಕ ಸದ್ಯದಲ್ಲೇ ಪ್ರಕಟ: ಪಾದಯಾತ್ರೆ ಮತ್ತೆ ಮುಂದುವರಿಸಿ, ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ಪೂರ್ಣಗೊಳಿಸಬೇಕು ಎಂದು ಎಲ್ಲರೂ ಅಭಿಪ್ರಾಯ ಪಟ್ಟಿದ್ದಾರೆ. ಕೋವಿಡ್ ನಿರ್ಬಂಧ ವಿಚಾರವಾಗಿ ಫೆ. 20 ರಂದು ನಿರ್ಣಯ ಕೈಗೊಂಡ ನಂತರ ಪಾದಯಾತ್ರೆ ಯಾವಾಗ ಆರಂಭವಾಗಲಿದೆ ಎಂಬುದನ್ನು ತಿಳಿಸುತ್ತೇವೆ. ಜತೆಗೆ ಪಕ್ಷದ ಸದಸ್ಯತ್ವ ನೋಂದಣಿ ಪ್ರಗತಿಯಲ್ಲಿದ್ದು, ರಾಜ್ಯ ಪ್ರವಾಸ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ. ಜವಾಬ್ದಾರಿ ವಹಿಸಿಕೊಂಡಿರುವವರಿಗೆ ಸದಸ್ಯತ್ವ ಅಭಿಯಾನ ಚುರುಕುಗೊಳಿಸುವಂತೆ ಮಾರ್ಗದರ್ಶನ, ಸೂಚನೆ ನೀಡಿದ್ದೇವೆ. ಈ ಎಲ್ಲ ವಿಚಾರವಾಗಿ ನಾವು ಇಂದಿನ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.
ಕಲಾಪದಲ್ಲಿ ಹಿಜಾಬ್ ಪ್ರಕರಣವನ್ನು ಮುಖ್ಯವಾಗಿ ಪ್ರಸ್ತಾಪ ಮಾಡಿತ್ತೀರೋ ಅಥವಾ ಸಚಿವ ಈಶ್ವರಪ್ಪ ಅವರ ಹೇಳಿಕೆ ವಿಚಾರವನ್ನೋ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಮಕ್ಕಳ ವಿಚಾರವಿರಲಿ, ಕಾನೂನು ಸುವ್ಯವಸ್ಥೆ ವಿಚಾರವಾಗಲಿ, ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾಕುತ್ತೇವೆ ಎಂದು ಸಚಿವರು ಹೇಳಿರುವ ವಿಚಾರದ ಕುರಿತು ಪ್ರಸ್ತಾಪ ಮಾಡುವುದು, ಚರ್ಚಿಸುವುದು ನಮ್ಮ ಜವಾಬ್ದಾರಿ. ಜನ ನಮಗೆ ಆ ಶಕ್ತಿ, ಸ್ಥಾನಮಾನ ನೀಡಿದ್ದಾರೆ' ಎಂದು ಉತ್ತರಿಸಿದರು.
ಹಿಜಾಬ್ ವಿಚಾರವಾಗಿ ಯಾರೂ ಅನಗತ್ಯ ಪ್ರತಿಕ್ರಿಯೆ ನೀಡಬಾರದು ಎಂಬ ಸೂಚನೆ ಮುಂದುವರಿಯುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಖಂಡಿತ ಮುಂದುವರಿಯಲಿದೆ. ಯಾರು ಯಾವ ವಿಚಾರವಾಗಿ ಮಾತನಾಡಬೇಕು ಎಂಬ ಬಗ್ಗೆ ನಿರ್ದೇಶನ ನೀಡಿದ್ದು, ನಾಳೆ ಅವರು ಮಾತನಾಡುತ್ತಾರೆ' ಎಂದು ಉತ್ತರಿಸಿದರು.