ದೇವನಹಳ್ಳಿ/ಬೆಂಗಳೂರು : ಮೇಕೆದಾಟು ಯೋಜನೆ ವಿಳಂಬದ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ತಮಿಳುನಾಡಿನವರದ್ದು ಜಮೀನಿಲ್ಲ, ಹಣವಿಲ್ಲ, ನೀರಿಲ್ಲ. ಹಾಗಾಗಿ, ಆದಷ್ಟು ಬೇಗ ಕಾಮಾಗಾರಿ ಆರಂಭಿಸುವಂತೆ ಒತ್ತಾಯಿಸಿದರು.
ಮೈಸೂರಿನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಿಕೆಶಿ ಮಾಧ್ಯಮದೊಂದಿಗೆ ಮಾತನಾಡಿದರು. ಮೇಕೆದಾಟು ಯೋಜನೆ ನಮ್ಮ ಕೈಯಲ್ಲಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಒಟ್ಟಾಗಿವೆ. ಎಲ್ಲಾ ಕ್ಲಿಯರೆನ್ಸ್ ಮುಗಿದಿದೆ. ಕೇಂದ್ರ ಸರ್ಕಾರದಿಂದ ಹಣ ಕೇಳುವ ಅವಶ್ಯಕತೆ ಇಲ್ಲ ಎಂದರು.
ಮೇಕೆದಾಟು ಯೋಜನೆ ನನ್ಮ ಮತ ಕ್ಷೇತ್ರಕ್ಕೆ ಬರುತ್ತದೆ. ವಿದ್ಯುತ್ ಉತ್ಪಾದನೆ ಮತ್ತು ಕುಡಿಯುವ ನೀರಿಗೆ ಉಪಯೋಗವಾಗುವ ಯೋಜನೆ ಇದಾಗಿದೆ. ತಮಿಳುನಾಡಿನವರು ಅವರ ರಾಜ್ಯದ ರಾಜಕಾರಣ ಮಾಡುತ್ತಾರೆ. ನಮ್ಮ ಸಿಎಂ ನೀರಾವರಿ ಸಚಿವರಾಗಿದ್ದವರು. ಅವರಿಗೆ ಈ ಬಗ್ಗೆ ಅರಿವಿದೆ. ಕೂಡಲೇ ಕಾಮಗಾರಿ ಆರಂಭಿಸಲು ನಾನೂ ಸಹ ಆಗ್ರಹಿಸುತ್ತೇನೆ ಎಂದರು.
ಇದನ್ನೂ ಓದಿ: ಯಾರಾದರೂ ಉಪವಾಸ ಕೂರಲಿ..ಮೇಕೆದಾಟು ಮಾಡಿಯೇ ತೀರುತ್ತೇವೆ: ಅಣ್ಣಾಮಲೈಗೆ ಬೊಮ್ಮಾಯಿ ತಿರುಗೇಟು