ಬೆಂಗಳೂರು: ಇತ್ತೀಚೆಗೆ ರಾಮನಗರ ಜಿಲ್ಲೆಯ ಕನಕಪುರದಲ್ಲಿ ಆಸಿಡ್ ದಾಳಿಗೆ ಒಳಗಾಗಿ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕನಕಪುರದ ಬಾಲಕಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಭಾನುವಾರ ರಾತ್ರಿ ಭೇಟಿ ಮಾಡಿ ಆರೋಗ್ಯ ಸ್ಥಿತಿ ವಿಚಾರಿಸಿ, ಸಾಂತ್ವನ, ಧೈರ್ಯ ಹೇಳಿದರು.
ಪ್ರೀತಿ ನಿರಾಕರಿಸಿದ್ದಕ್ಕೆ ಬಾಲಕಿ ಮೇಲೆ ಆಸಿಡ್ ಎರಚಿದ್ದ ಯುವಕ.. ಪ್ರೀತಿ ನಿರಾಕರಿಸಿದ ಬಾಲಕಿಯ ಹಿಂದೆ ಬಿದ್ದಿದ್ದ ಯುವಕ ಆಸಿಡ್ ದಾಳಿ ನಡೆಸಿದ್ದು, ಚಿಕಿತ್ಸೆಗಾಗಿ ಈಗ ಯುವತಿಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕನಕಪುರದ ಬೈಪಾಸ್ ರಸ್ತೆಯಲ್ಲಿ ಕಳೆದ ಶುಕ್ರವಾರ ಸಂಜೆ ಈ ಘಟನೆ ನಡೆದಿತ್ತು. ಬೈಪಾಸ್ ರಸ್ತೆಯ ಸಮೀಪವಿರುವ ಕೆರೆಯ ಏರಿಯ ಬಳಿ ವಾಕಿಂಗ್ ಮಾಡುವಾಗ ಯುವಕ ಬಂದು ಅಡ್ಡಗಟ್ಟಿ ಈ ದುಷ್ಕೃತ್ಯ ಎಸಗಿದ್ದ. ಕನಕಪುರದಲ್ಲೇ ಪ್ರಾಥಮಿಕ ಚಿಕಿತ್ಸೆಯ ಬಳಿಕ ಸಂತ್ರಸ್ತೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಣ್ಣಿನ ಭಾಗಕ್ಕೆ ಹಾನಿಯಾಗಿದ್ದು, ಈಗ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ.
ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮೆಕಾನಿಕ್ ಆಗಿ ಕೆಲಸ ಮಾಡುತ್ತಿರುವ ಸುಮಂತ್ (22) ಬಂಧಿತ ಆರೋಪಿ. ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿ ವಿರುದ್ಧ ಸೆಕ್ಷನ್ 326 ಹಾಗೂ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತಮ್ಮ ಕ್ಷೇತ್ರದಲ್ಲಿ ನಡೆದ ಘಟನೆ ಬಗ್ಗೆ ಡಿಕೆಶಿಗೆ ದಿಗ್ಭ್ರಮೆ.. ತಾವು ಪ್ರತಿನಿಧಿಸುವ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಇಂಥದೊಂದು ಘಟನೆ ನಡೆದಿರುವುದಕ್ಕೆ ಆತಂಕ ವ್ಯಕ್ತಪಡಿಸಿರುವ ಡಿ ಕೆ ಶಿವಕುಮಾರ್ ಅವರು ಇಂತಹ ಘಟನೆಗಳು ನಿಜಕ್ಕೂ ಆತಂಕಕಾರಿ ಎಂದು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಘಟನೆ ಖಂಡಿಸಿರುವ ಅವರು ಬಾಲಕಿಯ ಆರೋಗ್ಯ ಬೇಗ ಸುಧಾರಿಸಲಿ. ಮತ್ತು ಕೃತ್ಯ ಎಸಗಿರುವ ಯುವಕನಿಗೆ ಸೂಕ್ತ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದ ಸಚಿವ ಹಾಲಪ್ಪ ಆಚಾರ್, ಘಟನೆ ಖಂಡಿಸಿದ್ದ ಕೇಂದ್ರ ಸಚಿವೆ ಕರಂದ್ಲಾಜೆ.. ಶನಿವಾರ ಮಿಂಟೋ ಆಸ್ಪತ್ರೆಯಲ್ಲಿ ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತೆ ವಿದ್ಯಾರ್ಥಿನಿಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ಮಾಡಿ ಧೈರ್ಯ ತುಂಬಿದ್ದರು. ಬಳಿಕ ಮಾತನಾಡಿದ್ದ ಅವರು, ಹೆಣ್ಣುಮಕ್ಕಳ ಮೇಲೆ ನಿರಂತರ ದೌರ್ಜನ್ಯ ಮುಂದುವರೆಯುತ್ತಿದೆ. ನಿರ್ಭಯಾ ಪ್ರಕರಣ ಬಳಿಕ ಕಾನೂನಿನಲ್ಲಿ ಹಲವು ಬದಲಾವಣೆ ಆಯ್ತು. ಅಪ್ರಾಪ್ತ ವಯಸ್ಸಿನ ಹುಡುಗಿಯರಿಗೆ ಹಿಂಸೆ, ಕಿರುಕುಳ ಕೊಟ್ಟೋರಿಗೆ ಗಲ್ಲು ಶಿಕ್ಷೆ ಆಗುತ್ತೆ. ಆದರೆ ಕಾನೂನು ಕಾನೂನಾಗಿಯೇ ಉಳಿದುಕೊಳ್ಳುತ್ತಾ ಎಂದೆನಿಸುತ್ತಿದೆ. ಅಪ್ರಾಪ್ತರ ಮೇಲೆ ಅತ್ಯಾಚಾರ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ಆಗುತ್ತೆ, ಅದೇ ರೀತಿ ಆ್ಯಸಿಡ್ ಹಾಕೋರಿಗೂ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದರು.
ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್, ನಮ್ಮ ನಾಡಿನಲ್ಲಿ ಇಂತಹ ದುಷ್ಕರ್ಮಿಗಳು ಇರಬಾರದು. ಈ ರೀತಿಯ ಒಂದೆರಡು ಕ್ರಿಮಿಗಳಿಂದ ಹೆಣ್ಣು ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಸಮಾಜದಲ್ಲಿ ಇಂತಹ ದುಷ್ಕೃತ್ಯವನ್ನು ಸಹಿಸೋಕೆ ಸಾಧ್ಯ ಇಲ್ಲ. ಈ ರೀತಿಯ ಅಪರಾಧ ಮಾಡಿದರೆ ಕಾನೂನು ಚೌಕಟ್ಟಿನಲ್ಲಿ ಏನೇನು ಕ್ರಮ ತಗೊಬೇಕೋ ಅದನ್ನು ತೆಗದುಕೊಳ್ಳುತ್ತೇವೆ ಎಂದಿದ್ದರು.
ಇದನ್ನೂ ಓದಿ.. ಕನಕಪುರದಲ್ಲಿ ಪ್ರೀತಿ ನಿರಾಕರಿಸಿದ್ದಕ್ಕೆ ಅಪ್ರಾಪ್ತೆ ಮೇಲೆ ಆ್ಯಸಿಡ್ ದಾಳಿ