ಬೆಂಗಳೂರು: ಕಾಂಗ್ರೆಸ್ನಿಂದ ಮಾಜಿ ಮೇಯರ್ ಸಂಪತ್ ರಾಜ್ ಉಚ್ಛಾಟನೆ ಮಾಡಬೇಕು ಎಂದು ಆಗ್ರಹಿಸಿರುವ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, 'ಡಿ.ಜೆ.ಹಳ್ಳಿ ಕೆ.ಜಿ.ಹಳ್ಳಿ ಪ್ರಕರಣದಲ್ಲಿ'ಕೈ' ನಾಯಕರಿಂದ ಸಂಪತ್ ರಾಜ್ ರಕ್ಷಣೆ ಆಗುತ್ತಿದೆ ಎಂಬ ವಿಚಾರ ಪ್ರಸ್ತಾಪ ಆಗುತ್ತಿದೆ. ಹಾಗಾಗಿ, ಸಂಪತ್ ರಾಜ್ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಅಖಂಡ ಶ್ರೀನಿವಾಸಮೂರ್ತಿ ಹೇಳಿರುವುದು ಸರಿಯಲ್ಲ. ಯಾರನ್ನು ಉಚ್ಛಾಟಿಸಬೇಕು ಅಂತ ಮಾಧ್ಯಮಗಳ ಎದುರು, ಬಿಜೆಪಿಯವರ ಎದುರು ಮಾತನಾಡೋದಲ್ಲ. ಅಖಂಡಗೆ ನೋವಿದ್ರೆ ನನ್ನ ಬಳಿ ಬಂದು ಮಾತನಾಡಲಿ, ಮಾಧ್ಯಮದ ಎದುರು ಮಾತನಾಡೋದು ಶಿಸ್ತಲ್ಲ' ಎಂದರು.
'ನಾನು ಒಕ್ಕಲಿಗ. ಬೇರೆ ಜಾತಿ, ಇನ್ನೊಂದು ಜಾತಿ ಅಂತ ಹೋಗುವುದಿಲ್ಲ. ಆದರೆ ನಾನು ಹುಟ್ಟಿನಿಂದ ಒಕ್ಕಲಿಗ, ನನ್ನ ತಂದೆ ತಾಯಿ ಒಕ್ಕಲಿಗರು. ಶಾಲೆಗೆ ಸೇರುವಾಗ ಒಕ್ಕಲಿಗ ಅಂತ ಕೊಟ್ಟಿದ್ದೇನೆ. ನಾನು ಹುಟ್ಟಿನಿಂದ ಒಕ್ಕಲುತನ ಮಾಡುವವನು. ನಾನೊಬ್ಬ ಕಾಂಗ್ರೆಸ್ ಪಕ್ಷದ ಅಧ್ಯಕ್ಷ, ನನಗೊಂದೇ ಜಾತಿ ಅದು ಕಾಂಗ್ರೆಸ್ ಜಾತಿ. ಜಾತಿ ವಿಚಾರದಲ್ಲಿ ಮಾತನಾಡೋದಕ್ಕೆ ನಾನು ಹಿಂದೆಯೂ ಹೋಗಿಲ್ಲ. ಮುಂದೆಯೂ ಇಷ್ಟವಿಲ್ಲ' ಎಂದರು.
'ನಮಗೆ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವುದು ಮುಖ್ಯ. ಅದಕ್ಕಾಗಿ ನಾವು ಬಿಜೆಪಿಯವರ ಮತವನ್ನೂ ಸೆಳೆಯುತ್ತೇವೆ, ಜೆಡಿಎಸ್ನ ಮತವನ್ನೂ ಸೆಳೆಯುತ್ತೇವೆ. ಚುನಾವಣೆ ಬಂದಾಗ ಇದೆಲ್ಲವೂ ಸಹಜ' ಎಂದರು.