ಬೆಂಗಳೂರು: 1996ರಿಂದ 1999ರವರೆಗೆ ಸಿಟಿ ರವಿ ಅವರ ಬಳಿ ಏನೂ ಇರಲಿಲ್ಲ. ಅವರು ರೌಡಿಶೀಟರ್ ಆಗಿದ್ದು, ನಗರ ಹಾಗೂ ಗ್ರಾಮಾಂತರ ಠಾಣೆಗಳಲ್ಲಿ ಇವರ ಹೆಸರು ರೌಡಿ ಶೀಟರ್ ಪಟ್ಟಿಯಲ್ಲಿತ್ತು. ಇದು ಇತ್ತೀಚಿನವರೆಗೂ ಹೆಸರಿತ್ತು. ಈಗ ಅದನ್ನು ತೆಗೆಸಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಲಕ್ಷ್ಮಣ್ ಹೇಳಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷರಾದ ರಮೇಶ್ ಬಾಬು ಜತೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈಗ ಅವರ ಮೇಲೆ 4 ಕ್ರಿಮಿನಲ್ ಮೊಕದ್ದಮೆಗಳಿವೆ. ಅವರು ಚುನಾವಣಾ ಅಫಡವಿಟ್ನಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ನಮೂದಿಸಿದ್ದಾರೆ. ಐಪಿಸಿ ಸೆಕ್ಷನ್ 409, 420, 120, 463, 466, 123 ಅಡಿ ಕೇಸು ದಾಖಲಾಗಿವೆ.
ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆ ಸೇರಿದಂತೆ ಅನೇಕ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿವೆ. ಅವರೇ ನಮೂದಿಸಿರುವ ಹಿನ್ನೆಲೆಯಲ್ಲಿ ನಾನು ಇನ್ಮುಂದೆ ಅವರನ್ನು ಕ್ರಿಮಿನಲ್ 420 ರವಿ ಎಂದು ಕರೆಯುತ್ತೇನೆ. ಇವರು ಚಿಕ್ಕಮಗಳೂರು ಜಿಲ್ಲೆಯನ್ನು ರಿಪಬ್ಲಿಕ್ ಆಫ್ ಚಿಕ್ಕಮಗಳೂರು ಮಾಡಿಕೊಂಡಿದ್ದಾರೆ.
ಚಿಕ್ಕಮಗಳೂರಿನ ಶೇ. 95ರಷ್ಟು ಕಾಮಗಾರಿಗಳನ್ನು ಇವರ ಭಾವ ಹೆಚ್. ಪಿ ಸುದರ್ಶನ್ ಅವರೇ ಪಡೆದಿದ್ದಾರೆ. ಕೆಲವನ್ನು ಅವರ ಹೆಸರಿನಲ್ಲಿ ಪಡೆದರೆ ಮತ್ತೆ ಕೆಲವು ಬೇನಾಮಿ ಹೆಸರಲ್ಲಿ ಪಡೆದಿದ್ದಾರೆ. ಚಿಕ್ಕಮಗಳೂರು ಮೆಡಿಕಲ್ ಕಾಲೇಜು ನಿರ್ಮಾಣದ ಒಟ್ಟಾರೆ ಮೊತ್ತ 350 ಕೋಟಿ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ 190 ಕೋಟಿ ಕಾಮಗಾರಿಯನ್ನು ಸುದರ್ಶನ್ ಅವರೇ ಮಾಡುತ್ತಿದ್ದಾರೆ.
ಬಾಲಾಜಿ ಶೇಖರ್ ಎಂಬ ಗುತ್ತಿಗೆದಾರರ ಜತೆ ಸಹಭಾಗಿತ್ವದಲ್ಲಿ ಮಾಡುತ್ತಿದ್ದಾರೆ. ಇದಕ್ಕೆ ಟೆಂಡರ್ ಹಾಕಲು ಈ ಯೋಜನೆಯ ಮೊತ್ತದ ಅರ್ಧದಷ್ಟು ಯೋಜನೆಯನ್ನು ಮಾಡಿರಬೇಕು. ಆದರೆ, ಇವರು ಮಾಡದ ಕಾರಣ ರಾಮಲಿಂಗಂ ಕನ್ಟ್ರಕ್ಷನ್ ಅವರ ಸಹಾಯ ಪಡೆದಿದ್ದಾರೆ ಎಂದರು.
ಇದರ ಜತೆಗೆ ಬಸವರಳ್ಳಿ ಕೆರೆ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ 36 ಕೋಟಿ ಅನುದಾನ ನೀಡಿದೆ. ಇದು ಕೂಡ ಸುದರ್ಶನ್ ಅವರೇ ತೆಗೆದುಕೊಂಡಿದ್ದಾರೆ. ಈ ಕೆರೆ ಹೂಳು ತೆಗೆಯಲು 7.5 ಕೋಟಿ ಪಡೆದಿದ್ದಾರೆ. ಈ ಹೂಳು ಮಳೆಯಲ್ಲಿ ಕೊಚ್ಚಿ ಹೋಗಿದೆಯಂತೆ. ಇನ್ನು 60 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಇವರು ಬೇನಾಮಿ ಹೆಸರಲ್ಲಿ ಮಾಡುತ್ತಿದ್ದಾರೆ. ಇನ್ನು ಮುಂದಿನ ತಿಂಗಳು ಹುಬ್ಬಳ್ಳಿಯಲ್ಲಿ ಜಯದೇವ ಆಸ್ಪತ್ರೆ ಆರಂಭವಾಗುತ್ತಿದ್ದು, ಪ್ರಹ್ಲಾದ್ ಜೋಶಿ ಅವರಿಂದ ಈ ಗುತ್ತಿಗೆಯನ್ನು ಸುದರ್ಶನ್ ಅವರಿಗೆ ಕೊಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ರವಿ ಅವರ ತಂದೆ ಹೆಸರು ತಿಮ್ಮೇಗೌಡರು ರೈತರು, ಹತ್ತಿಕಟ್ಟೆ ಜಗನ್ನಾಥ್ ಎಂಬುವವರ ಮನೆಯಲ್ಲಿ ಟ್ರ್ಯಾಕ್ಟರ್ ಚಾಲಕರಾಗಿದ್ದರು. ಈಗ ಜಗನ್ನಾಥ್ ಅವರನ್ನೇ ತನ್ನ ಡ್ರೈವರ್ ಆಗಿ ಮಾಡಿಕೊಳ್ಳುವುದಾಗಿ ರವಿ ಅವರು ಹೇಳಿದ್ದಾರೆ. ಸುದರ್ಶನ್ ಅವರು ಡಿಸಿ, ಪೊಲೀಸ್ ಕಮಿಷನರ್, ಎಸ್ಪಿ, ಡಿವೈಎಸ್ ಪಿಗಳಿಗೆ ಕರೆ ಮಾಡಿ ಅವರನ್ನು ತಮ್ಮ ಮನೆಗೆ ಕರೆಸಿ ಅನಧಿಕೃತ ಸಭೆ ಮಾಡುತ್ತಾರೆ. ಅವರ ನಿರ್ದೇಶನದಂತೆ ಅಧಿಕಾರಿಗಳು ಕೆಲಸ ಮಾಡುತ್ತಾರೆ ಎಂದರು.
ಹಣ ನೀಡದವರ ಮೇಲೆ ಹಲ್ಲೆ: ನಮ್ಮ ಮಾಹಿತಿ ಪ್ರಕಾರ, ಬೇನಾಮಿ ಹೆಸರಲ್ಲಿ ದುಬೈನಲ್ಲಿ 2 ಹೋಟೆಲ್, ದೇವನಹಳ್ಳಿಯಲ್ಲಿ 2-3 ಅಪಾರ್ಟ್ಮೆಂಟ್ ಹೆಚ್ಎಎಲ್ ರಸ್ತೆ ಬಳಿ 10 ಮನೆಗಳಿವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಇದೆಲ್ಲವೂ ಹೇಗೆ ಬಂತು ಎಂಬುದನ್ನು 100ಕ್ಕೆ 100ರಷ್ಟು ಮಾಡುತ್ತೇವೆ.
ಸಿ. ಟಿ ರವಿ ಎಂಬ ಪ್ರಬಲ ವ್ಯಕ್ತಿಯ ಚರಿತ್ರೆಯನ್ನು ನಾವು ಜನರ ಮುಂದೆ ಇಡಬೇಕು. ಅವರು ಇಂದು 3 ಸಾವಿರ ಕೋಟಿಗೂ ಹೆಚ್ಚು ಆಸ್ತಿ ಬೇನಾಮಿ ಹೆಸರಲ್ಲಿದೆ. ಚಿಕ್ಕಮಗಳೂರಿನಲ್ಲಿ ಯಾವುದೇ ಕಾಮಗಾರಿ, ಯಾರೇ ಮನೆ ಕಟ್ಟಬೇಕಾದರೆ ಸುದರ್ಶನ್ ಅವರ ಅಂಗಡಿಯಲ್ಲೇ ಸಿಮೆಂಟ್, ಇಟ್ಟಿಗೆ ಖರೀದಿ ಮಾಡಬೇಕು. 1996ರಿಂದ ಇಂದಿಗೂ ದತ್ತ ಜಯಂತಿ ನಡೆಯುವಾಗ ಇವರು ವಸೂಲಿ ಮಾಡುತ್ತಿದ್ದಾರೆ. ಹಣ ನೀಡದವರ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಣ್ ಆರೋಪ ಮಾಡಿದರು.
ನೀವು ಮಾತೆತ್ತಿದರೆ ಡಿ ಕೆ ಶಿವಕುಮಾರ್ ಅವರ ಬಗ್ಗೆ ಮಾತನಾಡುತ್ತೀರಿ. ನೀವು ಸತ್ಯವಂತರಾಗಿದ್ದರೆ ನಿಮ್ಮ ಆದಾಯ, ಆಸ್ತಿಗಳು ಎಲ್ಲಿಂದ ಹೇಗೆ ಬಂತು ಎಂದು ತನಿಖೆ ಮಾಡಿಸಿ ಎಂದು ಇದೇ ವೇಳೆ ಒತ್ತಾಯಿಸಿದರು.
ರೌಡಿಶೀಟರ್ ಯಾಕೆ ಸಮರ್ಥಿಸಿಕೊಂಡಿದ್ದೀರಿ?: ಇದು ಕೇವಲ ಪ್ರಾಸ್ತಾವಿಕ ಸಂಚಿಕೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಚಿಕೆಗಳಲ್ಲಿ ನಿಮ್ಮ ಬಂಡವಾಳ ಬಯಲು ಮಾಡುತ್ತೇನೆ. ನಾನು ಬೇಕಾದರೆ ನಿಮ್ಮ ಕಚೇರಿಗೆ ಒಬ್ಬನೇ ಬರುತ್ತೇನೆ. ಮಾಧ್ಯಮಗಳ ಮುಂದೆ ಚರ್ಚೆ ಮಾಡೋಣ. ನಿಮ್ಮ ಇತಿಹಾಸವೇನು? 20 ವರ್ಷ ನೀವು ಏನಾಗಿದ್ದಿರಿ? ನಿಮ್ಮ ವಿರುದ್ಧ ಯಾವ ಕಾರಣಕ್ಕೆ ಕ್ರಿಮಿನಲ್ ಪ್ರಕರಣಗಳಿವೆ? ಯಾವ ಕಾರಣಕ್ಕೆ ನೀವು ರೌಡಿ ಶೀಟರ್ ಆಗಿದ್ದೀರಿ? ರೌಡಿಶೀಟರ್ ಯಾಕೆ ಸಮರ್ಥಿಸಿಕೊಂಡಿದ್ದೀರಿ? ಎಂದು ಚರ್ಚೆ ಆಗಲಿ. ಇಲ್ಲದಿದ್ದರೆ ಈ ಬಗ್ಗೆ ತನಿಖೆ ಮಾಡಿಸಿ ಎಂದು ಆಗ್ರಹಿಸುತ್ತಿದ್ದೀನಿ ಎಂದು ಸವಾಲು ಕೂಡಾ ಹಾಕಿದರು.
ಚಿಕ್ಕಮಗಳೂರು ಮೆಡಿಕಲ್ ಕಾಲೇಜು ನಿರ್ಮಾಣ ಕಾಮಗಾರಿ ಗುತ್ತಿಗೆಗೆ ಬೇರೆಯವರು ಶೇ. 100ಕ್ಕಿಂತ ಹೆಚ್ಚಿನ ಮೊತ್ತವನ್ನು ಬಿಡ್ ಮಾಡಿದ್ದಾರೆ. ಹೆಚ್ಚಿನ ಮೊತ್ತ ಬಿಡ್ ಮಾಡಿದವರಿಗೆ ಬಿಟ್ಟು ನಿಮ್ಮ ಭಾವನವರಿಗೆ ಹೇಗೆ ಗುತ್ತಿಗೆ ಸಿಗುವಂತೆ ಮಾಡಿದ್ದೀರಿ? ನೀವು ಹಿಟ್ ಅಂಡ್ ರನ್ ಮಾಡಬಾರದು. ನಾವು ಕೇಳುವ ಪ್ರಶ್ನೆಗೆ ನೇರ ಉತ್ತರ ನೀಡಬೇಕು. ನಿಮ್ಮ ವಿರುದ್ಧ ಮೋಸ ಪ್ರಕರಣ, ಕ್ರಿಮಿನಲ್ ಕೇಸ್ ಯಾಕೆ ಹಾಕಿದ್ದಾರೆ? ಅದು ಮುಕ್ತಾಯವಾಗಿದೆಯಾ? ಎಂದು ಚರ್ಚೆ ಮಾಡೋಣ ಎಂದರು.
ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸುಳ್ಳಿನ ಪ್ರಚಾರ: ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅವರ ಸಚಿವರು ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸುತ್ತಿದ್ದೇವೆ ಎಂದು ಊರೆಲ್ಲಾ ಡಂಗೂರ ಸಾರಿಕೊಂಡು ಪರಿಶಿಷ್ಟ ಜನರನ್ನು ಗುಗ್ಗೂಗಳನ್ನಾಗಿ ಮಾಡಲು ಹೊರಟಿದ್ದಾರೆ. ಆದರೆ, ಸಂಸತ್ತಿನಲ್ಲಿ ತಮಿಳುನಾಡಿನ ಸದಸ್ಯರು ರಾಜ್ಯ ಸರ್ಕಾರಗಳು ಶೇ.50ರಷ್ಟು ಮೀಸಲಾತಿ ಮಿತಿ ಮೀರಿ ಮೀಸಲಾತಿಯನ್ನು ನೀಡುವ ಅವಕಾಶ ಇದೆಯೇ? ಎಂದು ಕೇಳಿದ ಪ್ರಶ್ನೆಗೆ ಸಮಾಜ ಕಲ್ಯಾಣ ಸಚಿವರು ಕೊಟ್ಟಿರುವ ಉತ್ತರದಲ್ಲಿ, ‘ಯಾವುದೇ ಕಾರಣಕ್ಕೆ ಮೀಸಲಾತಿಯನ್ನು ಶೇ.50ಕ್ಕಿಂತ ಹೆಚ್ಚಿಸುವ ಅವಕಾಶವಿಲ್ಲ. ಸುಪ್ರೀಂ ಕೋರ್ಟ್ ಮಾರ್ಗಸೂಚಿಯಲ್ಲಿ ಇದು ಸ್ಪಷ್ಟವಾಗಿ ಇದೆ. ಇಂತಹ ಯಾವುದೇ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದೆ ಇಲ್ಲ. ಈ ವಿಚಾರದಲ್ಲಿ ಬದಲಾವಣೆ ಮಾಡುವ ಅವಕಾಶಗಳು ನಮ್ಮ ಮುಂದೆ ಇಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಇವರು ಮೀಸಲಾತಿ ವಿರುದ್ಧ ಇದ್ದಾರೆ: ಇದಕ್ಕೆ ಬೊಮ್ಮಾಯಿ ಅವರು ಉತ್ತರಿಸಬೇಕು. ಈ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗ, ಮುಂದಿನ ದಿನಗಳಲ್ಲಿ ಈ ಪ್ರಸ್ತಾವನೆಯನ್ನು ನೀಡುತ್ತೇವೆ ಎಂದು ಹೇಳಿದ್ದಾರೆ. ಈ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಶೆಡ್ಯೂಲ್ನಲ್ಲಿ ಸೇರಿಸಿಲ್ಲ ಏಕೆ? ಕೇಂದ್ರಕ್ಕೆ ಇದುವರೆಗೂ ಪ್ರಸ್ತಾವನೆ ಸಲ್ಲಿಸಿಲ್ಲ ಯಾಕೆ? ಪರಿಶಿಷ್ಟ ಸಮುದಾಯದ ಜನರು ಡೋಂಗಿ ಹಾಗೂ ಗಿಮಿಕ್ ರಾಜಕಾರಣ ನಂಬಬೇಡಿ.
ಇವರು ಮೀಸಲಾತಿ ವಿರುದ್ಧ ಇದ್ದಾರೆ. ಇವರೇ ರಾಮಾ ಜೋಯೀಸ್ ಅವರ ಮೂಲಕ ಮೀಸಲಾತಿ ವಿರುದ್ಧ ಕೇಸ್ ಹಾಕಿಸಿದ್ದರು. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇವರು ಪಂಚಮಸಾಲಿ ಹಾಗೂ ಒಕ್ಕಲಿಗರಿಗೂ ಇಂತಹ ಸುಳ್ಳು ಮೀಸಲಾತಿ ನೀಡುತ್ತಾರೆ. ಮೇ ವರೆಗೂ ಏನೆಲ್ಲಾ ನಾಟಕವಾಡಬಹುದೋ ಅದನ್ನು ಮಾಡುತ್ತಾರೆ ಎಂದು ಇದೇ ವೇಳೆ ಲೇವಡಿ ಮಾಡಿದರು.