ಬೆಂಗಳೂರು: ಆರ್.ಆರ್. ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ನವೀನ್ ಅವರನ್ನು ವರ್ಗಾವಣೆ ಮತ್ತು ಅಮಾನತುಗೊಳಿಸುವಂತೆ ಕೋರಿ ಕೆಪಿಸಿಸಿ ವತಿಯಿಂದ ಮುಖ್ಯ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಕುಸುಮಾ ಹಾಗೂ ಇತರರ ಮೇಲೆ ಪೂರ್ವಾಗ್ರಹ ಪೀಡಿತವಾಗಿ ಹಾಗೂ ಕಾನೂನು ಬಾಹಿರವಾಗಿ ಎಫ್.ಐ.ಆರ್ ದಾಖಲಿಸಲಾಗಿದೆ. ನಾಮಪತ್ರ ಸಲ್ಲಿಕೆಗೆ ತೆರಳಿದ್ದ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಅವರ ವಿರುದ್ಧ ದೂರು ದಾಖಲಿಸಲಾಗಿದೆ. ಇದೊಂದು ದುರುದ್ದೇಶಪೂರಿತ ದೂರು ಆಗಿದ್ದು ಸರ್ಕಾರದ ಕೈಗೊಂಬೆಯಾಗಿ ಪೊಲೀಸರು ಕಾರ್ಯ ಮಾಡಿದ್ದಾರೆ. ಕೂಡಲೇ ಮಾಹಿತಿಯನ್ನು ಕೂಲಂಕುಶವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕರು ಮನವಿಯಲ್ಲಿ ತಿಳಿಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಂಸದರಾದ ವಿ.ಎಸ್.ಉಗ್ರಪ್ಪ, ಎಮ್.ಸಲಿಮ್ ಮತ್ತಿತರರು ಚುನಾವಣಾ ಆಯೋಗದ ಕಚೇರಿಗೆ ತೆರಳಿ ಮುಖ್ಯಚುನಾವಣಾ ಅಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಇದಾದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಲೀಂ ಅಹಮದ್, ರಾಜಕೀಯ ಪ್ರೇರಿತವಾಗಿ ಕುಸುಮ ಹನುಮಂತರಾಯಪ್ಪ ವಿರುದ್ಧ ದೂರು ದಾಖಲಿಸಲಾಗಿದೆ. ದೂರು ದಾಖಲಿಸಿರುವ ನವೀನ್ರನ್ನು ಕೂಡಲೇ ವರ್ಗಾವಣೆ ಮಾಡಬೇಕು ಅಥವಾ ಅಮಾನತುಗೊಳಿಸಬೇಕು ಎಂದು ಮನವಿ ಮಾಡಿದ್ದೇವೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದಂತೆ ಈ ಇನ್ಸ್ಪೆಕ್ಟರ್ ನವೀನ್ ಕೇಳುತ್ತಾರೆ. ಮುನಿರತ್ನ ತಮ್ಮ ರಾಜಕೀಯಕ್ಕಾಗಿ ಈ ವ್ಯಕ್ತಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಇಂಥಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾವು ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದ್ದು, ಈ ವಿಚಾರವಾಗಿ ನಾಳೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ಸಿಕ್ಕಿದೆ ಎಂದಿದ್ದಾರೆ.