ಬೆಂಗಳೂರು: ಬ್ಯಾಂಕ್ಗೆ ನುಗ್ಗಿ ರೌಡಿಶೀಟರ್ ಬಬ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಏಳು ಮಂದಿ ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಡುಗೋಡಿ ಪೊಲೀಸ್ ಠಾಣೆಯ ರೌಡಿಶೀಟರ್ ಜೊಸೆಫ್ ಆಲಿಯಾಸ್ ಬಬ್ಲಿಯನ್ನು ಜು.19 ರಂದು ಕೋರಮಂಗಲದ ಯೂನಿಯನ್ ಬ್ಯಾಂಕ್ಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಆರೋಪಿಗಳು ಹತ್ಯೆಗೈದಿದ್ದರು. ಈ ಸಂಬಂಧ ರವಿ ಹಾಗೂ ಪ್ರದೀಪ್ ಎಂಬುವರ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದರು.
ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಗಣೇಶ್, ಅಲ್ಫಾನ್, ಪ್ರವೀಣ್, ಪಲ್ಲಾರವಿ, ಸೋಮಶೇಖರ್, ಸಾಲೊಮಾನ್ ಹಾಗೂ ಉದಯ್ ಕುಮಾರ್ ಎಂಬುವರು ಸೇರಿದಂತೆ ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವನ್ ಜೋಷಿ ತಿಳಿಸಿದ್ದಾರೆ.
ಬಬ್ಲಿ ಕೊಲೆಗೆ ಒಂದು ತಿಂಗಳಿಂದ ಸ್ಕೆಚ್
ಕಳೆದ ಏಪ್ರಿಲ್ನಲ್ಲಿ ಮೃತ ಬಬ್ಲಿ ಹಾಗೂ ಬಾಮೈದಾ ಜಾರ್ಜ್ ಸೇರಿದಂತೆ ಸಹಚರರು ವಿವೇಕನಗರ ಠಾಣಾ ವ್ಯಾಪ್ತಿಯ ನೀಲಸಂದ್ರ ಬಳಿ ರೌಡಿಶೀಟರ್ ಶಿವು ಮೇಲಿನ ವೈಷ್ಯಮ್ಯದ ಹಿನ್ನೆಲೆ ಅರುಣ್ ಕುಮಾರ್ ಎಂಬಾತನ ಮೇಲೆ ಕೊಲೆ ಯತ್ನ ನಡೆಸಿದ್ದರು. ಇದೇ ಗ್ಯಾಂಗ್ ಮೇನಲ್ಲಿ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ರವಿವರ್ಮಾ ಅಲಿಯಾಸ್ ಅಪ್ಪು ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು.
ವಿವೇಕನಗರ ಹಾಗೂ ಅಶೋಕ್ ನಗರದಲ್ಲಿ ನಡೆದ ಎರಡು ಅಪರಾಧ ಹಿನ್ನೆಲೆಗಳ ಬಗ್ಗೆ ದ್ವೇಷ ಸಾಧಿಸಿದ ಆರೋಪಿಗಳು, ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ಬಬ್ಲಿ ಕೊಲೆ ಮಾಡಲು ಸಂಚು ರೂಪಿಸಿದ್ದರು. ಕಳೆದ ಒಂದು ತಿಂಗಳಿಂದ ಬಬ್ಲಿ ಚಲನವಲನಗಳ ಮೇಲೆ ಆರೋಪಿಗಳು ನಿಗಾವಹಿಸಿದ್ದರು. ಇದರಂತೆ ಇದೇ ತಿಂಗಳು 19ರಂದು ಹೆಂಡತಿ-ಮಗಳ ಸಮೇತ ಬೈಕ್ನಲ್ಲಿ ಕೋರಮಂಗಲದ ಯೂನಿಯನ್ ಬ್ಯಾಂಕ್ಗೆ ಹೋದಾಗ ಬೆನ್ನಟ್ಟಿದ್ದ ಆರೋಪಿಗಳು, ಬಬ್ಲಿ ಮೇಲೆ ಅಟ್ಯಾಕ್ ಮಾಡಿ ಬ್ಯಾಂಕ್ಗೆ ನುಗ್ಗಿ ಹತ್ಯೆ ಮಾಡಿದ್ದರು.
ಬಂಧಿತರಾಗಿರುವ ಏಳು ಮಂದಿ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಹತ್ಯೆಗೆ ಪರೋಕ್ಷ ಕುಮ್ಮಕ್ಕು ನೀಡಿ, ಸಹಕರಿಸಿದ ಇನ್ನಷ್ಟು ಮಂದಿ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.