ದೊಡ್ಡಬಳ್ಳಾಪುರ: ಮೈಸೂರು ಮಹಾರಾಜರಿಂದ ಲೋಕಸೇವಾ ನಿರತ ಗೌರವಕ್ಕೆ ಪಾತ್ರರಾಗಿದ್ದ ದಿವಂಗತ ಡಿ. ಕೊಂಗಾಡಿಯಪ್ಪ ಪುತ್ಥಳಿಯನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ. ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿ ದೇವಾಂಗ ಸಮುದಾಯದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಹೃದಯ ಭಾಗದಲ್ಲಿರುವ ಮಾರುಕಟ್ಟೆ ಶಾಲೆ ಸಮೀಪ ಪ್ರತಿಷ್ಠಾಪಿಸಲಾಗಿರುವ ಕೊಂಗಾಡಿಯಪ್ಪ ಅವರ ಪುತ್ಥಳಿಯನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ. ಪ್ರತಿಮೆ ವಿರೂಪಗೊಳಿಸಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ದೇವಾಂಗ ಸಮುದಾಯದ ಮುಖಂಡರು ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿದರು.
ಸ್ಥಳಕ್ಕೆ ನಗರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಕೆ. ವೆಂಕಟೇಶ್ ಭೇಟಿ ನೀಡಿ ಪರಿಶೀಲಿಸಿದರು. ಪ್ರತಿಮೆ ಸುತ್ತಲಿನ ಅಂಗಡಿ, ಮನೆಗಳಲ್ಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲಾಗುವುದು. ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.