ಬೆಂಗಳೂರು: ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದ ಈ ಬಗ್ಗೆ ತೆಗೆದುಕೊಳ್ಳುವ ನಿರ್ಧಾರ, ಪ್ರತಿಕ್ರಿಯೆಗಳನ್ನು ನೋಡಿಕೊಂಡು ನಾಳೆಯ ಮುಷ್ಕರದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 72 ನಿಗಮ ಮಂಡಳಿಗಳಲ್ಲಿ ನೌಕರರಿಗೆ ಸರಿಯಾದ ವೇತನ ಆಗುತ್ತಿದೆ. ಕೆಲವು ಕಡೆ ಇನ್ನೂ ಹೆಚ್ಚಿನ ವೇತನ ನೀಡಲಾಗುತ್ತಿದೆ. ಆದರೆ ಯಾಕೆ ಸಾರಿಗೆ ನೌಕರರಿಗೆ ಸರ್ಕಾರ ಈ ಧೋರಣೆ ಅನುಸರಿಸುತ್ತಿದೆ. ಸಾರಿಗೆ ನೌಕರರು ಮಲತಾಯಿ ಮಕ್ಕಳೇ ಎಂದು ಪ್ರಶ್ನಿಸಿದರು.
ಹೋರಾಟಕ್ಕೆ ಇಳಿಯುವ ಮುನ್ನವೇ ಸರ್ಕಾರಕ್ಕೆ ಸಾಕಷ್ಟು ಸಲ ಮನವಿ ನೀಡಲಾಗಿತ್ತು. ಇದೀಗ ಮುಷ್ಕರ ನಡೆಸಬಾರದಿತ್ತು ಅಂತಾರೆ. ಜಲಮಂಡಳಿ ನೌಕಕರಿಗೆ ಯುಗಾದಿ ಹಬ್ಬಕ್ಕಾಗಿ ವಿಶೇಷ ಬೋನಸ್ ಕೊಡುತ್ತಿದೆ. ಸಾರಿಗೆಯು ಒಂದು ನಿಗಮವಾಗಿದ್ದು, ಕೆಲಸ ಮಾಡಿರುವ ಸಿಬ್ಬಂದಿಗೆ ಮಾರ್ಚ್ ತಿಂಗಳ ಸಂಬಳ ತಡೆ ಹಿಡಿಯಲಾಗುತ್ತಿದೆ. ಇದು ಸರಿನಾ ಎಂದು ಸರ್ಕಾರಕ್ಕೆ ಕೇಳಿದರು.
ಓದಿ: 'ರೈತರ ದಾರಿ ತಪ್ಪಿಸಿದ ಮುಖಂಡ ಈಗ KSRTC ನೌಕರರ ದಾರಿ ತಪ್ಪಿಸುತ್ತಿದ್ದಾರೆ'
ಇದು ಯೋಗ್ಯವಾದಂತಹ ನೀತಿ ಅಲ್ಲ. ತಾರತಮ್ಯ ಮಾಡುವುದು ಸರಿಯಲ್ಲ. ಸರ್ಕಾರ ತಮ್ಮ ತಪ್ಪನ್ನು ಪರಿಶೀಲಿಸಿ ಸರಿ ಪಡಿಸಬೇಕು. ಇಂತಹ ಬೇಜವಾಬ್ದಾರಿ ಹೇಳಿಕೆ ಸರಿಯಲ್ಲ ಎಂದು ಕೋಡಿಹಳ್ಳಿ ಹೇಳಿದ್ರು.
ಮುಂದಿನ ಹೋರಾಟದ ಬಗ್ಗೆ ಒಕ್ಕೂಟದ ಸದಸ್ಯರೊಂದಿಗೆ ಚರ್ಚಿಸಲಾಗುವುದು. ಸರ್ಕಾರದ ಧೋರಣೆ ಬದಲಾಗಬೇಕು ಎಂದು ಮನವಿ ಮಾಡಿದರು.