ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ತನ್ನ ಪ್ರಾಬಲ್ಯ ಸ್ಥಾಪಿಸಲು ಮುಂದಾಗಿರುವ ಕಾಂಗ್ರೆಸ್, ಈ ಭಾಗದ ಪ್ರಮುಖ ಜೆಡಿಎಸ್ ನಾಯಕ ಬಿ.ಎ. ಜೀವಿಜಯ ಅವರನ್ನು ಬುಧವಾರ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಿದೆ.
ಕುಶಾಲನಗರ ವ್ಯಾಪ್ತಿಯ ಜನಪ್ರಿಯ ನಾಯಕರಾಗಿರುವ 78 ವರ್ಷದ ಹಿರಿಯ ರಾಜಕಾರಣಿ ಜೀವಿಜಯ ಈಗಾಗಲೇ ಮಾನಸಿಕವಾಗಿ ಜೆಡಿಎಸ್ ಪಕ್ಷದಿಂದ ಹೊರನಡೆದಿದ್ದರು. 2019ರ ಮಾರ್ಚ್ನಲ್ಲಿಯೇ ಇವರು ಪಕ್ಷದ ಚಟುವಟಿಕೆಯಿಂದ ವಿಮುಖರಾಗಿದ್ದರು. ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಕೆ.ಎಂ. ಗಣೇಶ್ ಆಯ್ಕೆಯಾದ ಸಂದರ್ಭದಲ್ಲಿ ಅವರು ಪಕ್ಷದ ಮೇಲಿನ ಆಸಕ್ತಿ ಕಡಿಮೆ ಮಾಡಿಕೊಂಡಿದ್ದರು. ಇವರ ಸಲಹೆಯ ಹೊರತಾಗಿಯೂ ಒಂದು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಎಚ್ ವಿಶ್ವನಾಥ್ ನೇಮಕ ಆದೇಶ ಹೊರಡಿಸಿದ್ದರು.
ಜೆಡಿಎಸ್ ಪಕ್ಷ ಡಬಲ್ ಸ್ಟ್ಯಾಂಡ್ ಸಂಸ್ಕೃತಿ ಹೊಂದಿದೆ: ಎಸ್.ಆರ್ ಪಾಟೀಲ್
ಈ ಎಲ್ಲಾ ಬೆಳವಣಿಗೆಯಿಂದ ಬೇಸರಗೊಂಡಿರುವ ಜೀವಿಜಯ ಇದೀಗ ಕಾಂಗ್ರೆಸ್ ಸೇರುವ ಆಸಕ್ತಿ ವ್ಯಕ್ತಪಡಿಸಿದ್ದು ಇಂದು ಪಕ್ಷದ ರಾಜ್ಯ ನಾಯಕರಾದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ಬೆಂಗಳೂರಿನ ಕ್ವೀನ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಡಿಕೆಶಿ ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದಾರೆ.
ಸೋಮವಾರಪೇಟೆ ವಿಧಾನಸಭೆ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದ ಜೀವಿಜಯ, ಸಚಿವರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. 1983, 1985 ಹಾಗೂ 2004ರಲ್ಲಿ ಗೆಲುವು ಸಾಧಿಸಿದ್ದರು. ಮೊದಲ ಎರಡು ಗೆಲುವು ಜನತಾ ಪಕ್ಷದ ಮೂಲಕ ಆಗಿದ್ದರೆ 2004ರ ಗೆಲುವು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು. 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅವರು ಮೈಸೂರು ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. 2004ರಲ್ಲಿ ಗೆಲುವು ಸಾಧಿಸಿದ್ದ ಅವರು 2008ರಲ್ಲಿ ಅಪ್ಪಚ್ಚುರಂಜನ್ ವಿರುದ್ಧ ಕಾಂಗ್ರೆಸ್ನಿಂದ ಸೋಲನುಭವಿಸಿದ್ದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಸಿಗಲಿಲ್ಲ. ಇದರಿಂದ ಜೆಡಿಎಸ್ ಸೇರಿ ಅಭ್ಯರ್ಥಿಯಾಗಿ ಮತ್ತೊಮ್ಮೆ ಅಪ್ಪಚ್ಚುರಂಜನ್ ವಿರುದ್ಧವೇ ಅಲ್ಪ ಮತಗಳ ಅಂತರದ ಸೋಲು ಕಂಡರು.
2018ರ ವಿಧಾನಸಭೆ ಚುನಾವಣೆಯಲ್ಲಿ ಕೂಡ ಜೆಡಿಎಸ್ನಿಂದ ಸ್ಪರ್ಧಿಸಿ ಮತ್ತೊಮ್ಮೆ ಸೋಲನುಭವಿಸಿದರು. ಆದರೆ ದ್ವಿತೀಯ ಸ್ಥಾನವನ್ನು ಬಿಟ್ಟುಕೊಡಲಿಲ್ಲ. ಇವರು ಕಾಂಗ್ರೆಸ್ ತಿಳಿಸಿದ ನಂತರ ಜಿಲ್ಲೆಯಲ್ಲಿ ಪಕ್ಷಕ್ಕೆ ಸಾಕಷ್ಟು ಹಿನ್ನಡೆ ಉಂಟಾಗಿದ್ದು ಹಲವು ವರ್ಷಗಳಿಂದ ಪಕ್ಷದ ಸಂಘಟನೆಗೆ ಶ್ರಮಿಸಿದ್ದವರನ್ನು ಮರಳಿ ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಇದಕ್ಕಾಗಿ ಹಲವು ದಿನಗಳಿಂದ ಮಾತುಕತೆ ನಡೆದಿತ್ತು. ಇದೀಗ ಮಾಜಿ ಸಚಿವ ಜೀವಿಜಯ ಕಾಂಗ್ರೆಸ್ಗೆ ವಾಪಸ್ಸಾಗುವ ದಿನ ಬಂದಿದೆ.