ಬೆಂಗಳೂರು: ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಕುರಿತು ಕೆಲವು ಸಂಶಯಗಳು ಮೂಡಿರುವ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಧಾರವನ್ನು ಮರು ಪರಿಶೀಲನೆ ಮಾಡಲಾಗುತ್ತಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಸಭೆಯಲ್ಲಿ ಜಿಂದಾಲ್ಗೆ ಜಮೀನು ನೀಡಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಹಾಗಾಗಿ, ಈ ವಿಚಾರ ಮತ್ತೆ ಸಂಪುಟ ಸಭೆಯಲ್ಲೇ ಚರ್ಚೆಯಾಗಬೇಕು. ಸಂಪುಟ ಸಭೆ ಸುಪ್ರೀಂ ಆಗಿದೆ. ಅದರ ನಿರ್ಧಾರವೇ ಅಂತಿಮ ಆಗಲಿದೆ ಎಂದರು.
ಜಿಂದಾಲ್ಗೆ ಜಮೀನು ನೀಡುವ ತೀರ್ಮಾನದ ವಿಚಾರದಲ್ಲಿ ಸಂಶಯಕ್ಕೆ ಎಡೆಮಾಡಿಕೊಡಬಾರದು ಎಂಬ ಉದ್ದೇಶದಿಂದ ಪುನರ್ ಪರಿಶೀಲನೆಗಾಗಿ ಮತ್ತೆ ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಹೇಳಿದರು.
ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಅಸಮಾಧಾನದಿಂದ ಮರು ಪರಿಶೀಲನೆ ಮಾಡುತ್ತಿಲ್ಲ. ಹೆಚ್.ಕೆ.ಪಾಟೀಲ್, ಪ್ರತಿಪಕ್ಷದವರು ಸೇರಿದಂತೆ ಹಲವರಿಗೆ ಜಿಂದಾಲ್ಗೆ ಜಮೀನು ನೀಡುವ ವಿಷಯದಲ್ಲಿ ಕೆಲವೊಂದು ಸಂಶಯ ಮೂಡಿದೆ. ಆ ಸಂಶಯ ಪರಿಹಾರ ಮಾಡುವ ಕೆಲಸ ಮಾಡಬೇಕಿದೆ. ಹಾಗಾಗಿ, ಮರು ಪರಿಶೀಲನೆಗೆ ಮುಂದಾಗಿದ್ದೇವೆ ಎಂದರು.
2004-05, 2006-07ರಲ್ಲಿ ಲೀಸ್ ಕಮ್ ಸೇಲ್ ಮಾಡಲಾಗಿದೆ. ಅದರಂತೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದರ ಬಗ್ಗೆ ಜನರಲ್ಲಿ ಸಂಶಯ, ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಅದರ ಪರಿಹಾರಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಮುಂದಿನ ಸಚಿ ಸಂಪುಟ ಸಭೆ ಯಾವ ತೀರ್ಮಾನ ಕೈಗೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಹೇಳಿದರು.
ಸಾರ್ವಜನಿಕರಿಗೆ ಸರ್ಕಾರದ ನಿರ್ಧಾರ ಅನುಮಾನ ಮೂಡಿಸಿದಾಗ ಅದನ್ನು ಬಗೆಹರಿಸುವ ಕೆಲಸ ಸರ್ಕಾರ ನಡೆಸುತ್ತಿರುವವರು ಮಾಡಬೇಕು. ಅದು ಪ್ರಜಾಪ್ರಭುತ್ವದಲ್ಲಿ ಮಾಡಬೇಕಾದ ಕೆಲಸ. ಹೀಗಾಗಿ ಜಿಂದಲ್ಗೆ ಭೂಮಿ ಕೊಡುವ ಕಡತ ಮರು ಪರಿಶೀಲನೆಗೆ ಮುಂದಾಗಿದ್ದೇವೆ ಎಂದರು.