ಬೆಂಗಳೂರು: ಹುಟ್ಟಿನಿಂದಲೇ ಹೃದ್ರೋಗ ಸಮಸ್ಯೆ ಹೊಂದಿದ್ದ ಅಸ್ಸೋಂ ರಾಜ್ಯದ ಯುವತಿಯೊಬ್ಬಳಿಗೆ ಅನಸ್ತೇಷಿಯಾ ಚುಚ್ಚುಮದ್ದು ನೀಡದೇ ಕೇವಲ ಐವಿ ಸೆಡೇಷನ್ ಮೂಲಕ ಕ್ಲಿಷ್ಟಕರ ಕಿಡ್ನಿ ಕಲ್ಲು ನಿವಾರಣೆ ಶಸ್ತ್ರ ಚಿಕಿತ್ಸೆಯನ್ನು ಜಯನಗರದ ಯುನೈಟೆಡ್ ಆಸ್ಪತ್ರೆಯ ವೈದ್ಯರು ನೆರವೇರಿಸುವ ಮೂಲಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಹುಟ್ಟಿನಿಂದಲೇ ಹೃದ್ರೋಗ ಸಮಸ್ಯೆ ಹೊಂದಿದ್ದ ಯುವತಿಯೊಬ್ಬಳು ಅತಿಯಾದ ಹೊಟ್ಟೆನೋವಿನೊಂದಿಗೆ ಆಸ್ಪತ್ರೆಗೆ ಬಂದಿದ್ದರು. ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಹೊಟ್ಟೆನೋವಿಗೆ ಮೂತ್ರಪಿಂಡದಲ್ಲಿ ಬೆಳೆದಿರುವ ಕಲ್ಲು ಕಾರಣ ಎಂದು ತಿಳಿಯಿತು. ಆದರೆ, ಹೃದ್ರೋಗಿ ಆಗಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅರಿವಳಿಕೆ ಚುಚ್ಚುಮದ್ದನ್ನು (ಅನಸ್ತೇಷಿಯಾ) ಅವರಿಗೆ ನೀಡುವಂತಿರಲಿಲ್ಲ.
ಹೀಗಾಗಿ ಆಸ್ಪತ್ರೆಯ ಪ್ರಧಾನ ಮೂತ್ರಶಾಸ್ತ್ರಜ್ಞ (ಯೂರಾಲಜಿಸ್ಟ್) ಹಾಗೂ ಆಸ್ಪತ್ರೆಯ ಕ್ಲಿನಿಕಲ್ ಎಕ್ಸಲೆನ್ಸ್‌ನ ನಿರ್ದೇಶಕ ಡಾ.ರಾಜೀವ್ ಬಾಶೆಟ್ಟಿ ನೇತೃತ್ವದಲ್ಲಿ ವಿಶೇಷವಾದ ಈ.ಎಸ್. ಡಬ್ಲ್ಯೂ.ಎಲ್ ಪ್ರಕ್ರಿಯೆಯನ್ನು ಬಳಸಿ ಮೂತ್ರದ ಕಲ್ಲನ್ನು ತೆಗೆಯಲಾಗಿದೆ.
ಆಸ್ಪತ್ರೆಯ ಪ್ರಧಾನ ಅರಿವಳಿಕೆ ತಜ್ಞರಾದ ಡಾ. ಸಾಗರ್ ಶ್ರೀನಿವಾಸ್ ಈ ಸಮಸ್ಯೆಯ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಅತಿಯಾದ ಹಾಗೂ ಅಪಾಯಕಾರಿಯಾದ ಈ ಪ್ರಕರಣವನ್ನು ನಿರ್ವಹಿಸಲು ಒಪ್ಪಿಕೊಂಡ ವೈದ್ಯರು ಕೇವಲ ಐ ವಿ ಸೆಡೇಷನ್, ನಿದ್ರೆಗೆ ಜಾರುವ ಔಷಧವನ್ನು ನೀಡಿ ನಿರಂತರವಾಗಿ ಹೃದಯ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಾ ಚಿಕಿತ್ಸೆಗೆ ಅನುವು ಮಾಡಿಕೊಟ್ಟಿದ್ದಾರೆ.
ನಂತರ ಡಾ.ರಾಜೀವ್ ಬಾ ಶೆಟ್ಟಿ ಡಿಜೆ ಸ್ಟೆಂಟಿಂಗ್ ಹಾಗೂ ಈ.ಎಸ್.ಡಬ್ಲ್ಯೂ.ಎಲ್ ಪ್ರಕ್ರಿಯೆಯ ಮೂಲಕ ರೋಗಿಯ ಮೂತ್ರಕೋಶದಲ್ಲಿದ್ದ ಕಲ್ಲನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ ಹಾಗೂ ಚಿಕಿತ್ಸೆಯುದ್ದಕ್ಕೂ ರೋಗಿಯ ಹೃದಯ ಸ್ಥಿತಿ ಸ್ಥಿರವಾಗಿರುವಂತೆ ನೋಡಿಕೊಳ್ಳಲಾಗಿದೆ.
ಪ್ರತಿ ಹೆಜ್ಜೆಯಲ್ಲೂ ವೈದ್ಯ ತಂಡದಿಂದ ಎಚ್ಚರಿಕೆ: ಯುನೈಟೆಡ್ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಶಾಂತಕುಮಾರ ಮುರುಡಾ ಈ ಕುರಿತು ಮಾತನಾಡಿ ಈ ಪ್ರಕರಣದಲ್ಲಿ ಸಣ್ಣ ತಪ್ಪೂ ಆಗುವಂತಿರಲಿಲ್ಲ. ಹೀಗಾಗಿ ಪ್ರತಿ ಹೆಜ್ಜೆಯಲ್ಲೂ ನಮ್ಮ ವೈದ್ಯತಂಡ ಅತ್ಯಂತ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿದ್ದು, ರೋಗಿಯ ಆರೋಗ್ಯ ಸ್ಥಿತಿ ಚೇತರಿಕೆ ಕಾಣುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಿರ್ವಹಣೆ: ಆಸ್ಪತ್ರೆಯು ಸುಸಜ್ಜಿತವಾದ ಐ.ಸಿ.ಯು ಹೊಂದಿರುವುದಲ್ಲದೇ ಇಂಥ ಸಂಕೀರ್ಣ ಪ್ರಕರಣಗಳನ್ನು ನಿಭಾಯಿಸಲು ಸಾಧ್ಯವಾಗುವಂಥ ತರಬೇತಿ ಪಡೆದ ತಜ್ಞ ವೈದ್ಯರು ಹಾಗೂ ಸಿಬ್ಬಂದಿಯನ್ನು ಹೊಂದಿದೆ. ಯಾವುದೇ ಆಸ್ಪತ್ರೆಗಳು ಒಪ್ಪದ ಈ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದ್ದು, ಇಂತಹ ಎಲ್ಲ ರೀತಿಯ ಕ್ಲಿಷ್ಟಕರ ಚಿಕಿತ್ಸೆ ಗಳನ್ನು ನೆರವೇರಿಸಲು ನಮ್ಮ ಆಸ್ಪತ್ರೆ ಸಜ್ಜಾಗಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ವಿಕ್ರಮ್ ಸಿದ್ದಾರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ: ಎಚ್ಐವಿ ಸೋಂಕಿತ ಘಾನಾ ಪ್ರಜೆಗೆ ಅಪರೂಪದ ಕಿಡ್ನಿ ಕಸಿ ಆಪರೇಷನ್.. ಕೋಲ್ಕತ್ತಾ ಆಸ್ಪತ್ರೆಯ ಸಾಧನೆ