ಬೆಂಗಳೂರು: ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನಿವಾಸಕ್ಕೆ ನಟ ಕಿಚ್ಚ ಸುದೀಪ್ ಭೇಟಿ ನೀಡಿದ್ದು, ವಿಷ್ಟುವರ್ಧನ್ ಸ್ಮಾರಕ ನಿರ್ಮಾಣ ವಿಚಾರದ ಕುರಿತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ನಿನ್ನೆ ಸಂಜೆ ಸದಾಶಿವನಗರದಲ್ಲಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನಿವಾಸಕ್ಕೆ ಸುದೀಪ್ ಭೇಟಿ ನೀಡಿದ್ದರು. ಈ ಭೇಟಿ ಮಧ್ಯಾಹ್ನ 1 ಗಂಟೆಗೆ ಕುಮಾರಕೃಪಾ ಅತಿಥಿಗೃಹದಲ್ಲಿರುವ ಡಿಸಿಎಂ ಗೃಹ ಕಚೇರಿಯಲ್ಲಿ ನಿಗದಿಯಾಗಿತ್ತಾದರೂ ಕಾರಣಾಂತರಗಳಿಂದ ಸಂಜೆಗೆ ಮುಂದೂಡಿಕೆಯಾಗಿ ಸಂಜೆ ಮಾತುಕತೆ ನಡೆಯಿತು ಎಂದು ತಿಳಿದುಬಂದಿದೆ.
ಡಿಸಿಎಂ ಡಿಕೆ ಶಿವಕುಮಾರ್ ಮತ್ತು ನಟ ಸುದೀಪ್ ಭೇಟಿ ಅಧಿಕೃತವಾಗಿದ್ದರೂ ಯಾವ ವಿಷಯದ ಕುರಿತು ಚರ್ಚೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಡಾ.ವಿಷ್ಣು ಅಪ್ಪಾಜಿ ಸ್ಮಾರಕ ಕುರಿತು ನನ್ನದು ಅಂದು -ಇಂದು ಒಂದೇ ನಿಲುವು. ಮೈಸೂರಿನಲ್ಲಿ ಸ್ಮಾರಕವಾದರೂ, ಅಂತ್ಯಸಂಸ್ಕಾರ ಮಾಡಿದ ಸ್ಥಳದಲ್ಲಿ ಪುಣ್ಯಭೂಮಿ ಆಗಬೇಕು. ಈ ವಿಷಯವಾಗಿ ಅಭಿಮಾನಿ ಸಂಘಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾನೂ ನಿಮ್ಮಲ್ಲೊಬ್ಬ ಎಂದು ಭಾವಿಸಿ ನೀವು ಮುನ್ನಡೆಯಿರಿ. ನನ್ನಿಂದಾಗುವ ಎಲ್ಲವನ್ನೂ ಪುಣ್ಯಭೂಮಿಗಾಗಿ ಮಾಡುವೆ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದು, ಅದರ ಬೆನ್ನಲ್ಲೇ ಡಿಸಿಎಂ ಜೊತೆ ಸುದೀಪ್ ಮಾತುಕತೆ ನಡೆಸಿರುವುದರಿಂದ ವಿಷ್ಣು ಸ್ಮಾರಕ ನಿರ್ಮಾಣ ವಿಚಾರದ ಕುರಿತು ಈ ಭೇಟಿ ನಡೆದಿರಬಹುದು ಎನ್ನಲಾಗ್ತಿದೆ.
ಇದನ್ನೂ ಓದಿ : ವಿಷ್ಣು ಸ್ಮಾರಕಕ್ಕೆ ಭೂಮಿ ವಿಚಾರ : ದನಿಯೆತ್ತಿದ ಕಿಚ್ಚ, ಡಾಲಿ
ಡಾ. ವಿಷ್ಣುವರ್ಧನ್ ಅವರ ಸ್ಮಾರಕವು ಮೈಸೂರಿನಲ್ಲಿ ಇದ್ದರೂ ಅವರ ಅಭಿಮಾನಿಗಳ ಕೋರಿಕೆಯಂತೆ ಅಂತ್ಯಸಂಸ್ಕಾರಗೊಂಡ ಜಾಗದಲ್ಲಿಯೇ (ಅಭಿಮಾನ್ ಸ್ಟುಡಿಯೋ) ಪುಣ್ಯಭೂಮಿ ನಿರ್ಮಿಸಬೇಕು ಎಂದು ಡಿಸಿಎಂಗೆ ನಟ ಸುದೀಪ್ ಮನವಿ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಆದರೆ, ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅಥವಾ ನಟ ಸುದೀಪ್ ಹೆಚ್ಚಿನ ಮಾಹಿತಿ ನೀಡಿದ ನಂತರವಷ್ಟೇ ಗೊತ್ತಾಗಲಿದೆ.
ಇದನ್ನೂ ಓದಿ : ಕಿಚ್ಚ ಸುದೀಪ್ ಫಿಟ್ನೆಸ್ ಸೀಕ್ರೆಟ್ ಏನ್ ಗೊತ್ತಾ? ಅವರೇ ಹೇಳಿದ್ದಾರೆ ನೋಡಿ..