ಬೆಂಗಳೂರು: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021ಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಏಪ್ರಿಲ್ 1 ರಂದು ಲೋಗೋ, ಥೀಮ್ ಸಾಂಗ್, ಮೊಬೈಲ್ ಆ್ಯಪ್ ಹಾಗೂ ಜೆರ್ಸಿ ಬಿಡುಗಡೆಗೊಳಿಸಲಾಗುವುದು ಎಂದು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.
ವಿಧಾನಸೌಧದಲ್ಲಿ ನಿನ್ನೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಎರಡನೇ ಆವೃತ್ತಿ ಏಪ್ರಿಲ್ 24 ರಿಂದ ಮೇ 3 ರವರೆಗೆ ನಡೆಯಲಿದ್ದು, ಏಪ್ರಿಲ್ 1 ರಂದು ಕ್ರೀಡಾಕೂಟದ ಲೋಗೋ, ಥೀಮ್ ಸಾಂಗ್, ಜೆರ್ಸಿ, ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗುತ್ತದೆ. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಲೋಗೋ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಯುವಜನ ಮತ್ತು ಕ್ರೀಡೆ, ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್, ಕೇಂದ್ರ ಗೃಹ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಸಚಿವ ನಿಸಿತ್ ಪ್ರಾಮಾಣಿಕ್, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥ್ ನಾರಾಯಣ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ರಾಜ್ಯದ ಕ್ರೀಡಾ ಸಚಿವರು ತಿಳಿಸಿದರು.
ಏಪ್ರಿಲ್ 24 ರಂದು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಉದ್ಘಾಟನೆಗೆ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಆಗಮಿಸಲಿದ್ದಾರೆ. ಅಲ್ಲದೇ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
10 ದಿನಗಳ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ಜುಡೋ, ವಾಲಿಬಾಲ್, ಕಬ್ಬಡಿ, ಬಾಸ್ಕೆಟ್ ಬಾಲ್, ಕರಾಟೆ, ಮಲ್ಲಕಂಬ ಸೇರಿದಂತೆ 20 ಕ್ರೀಡೆಗಳು ನಡೆಯಲಿದ್ದು, ದೇಶದ 200ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಂದ 8 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು, ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. ಜೈನ್ ವಿವಿ ಕ್ಯಾಂಪಸ್, ಕಂಠೀರವ ಕ್ರೀಡಾಂಗಣದಲ್ಲಿ ಗೇಮ್ಸ್‌ಗಳು ನಡೆಯಲಿವೆ. ಈ ಕ್ರೀಡಾಕೂಟವನ್ನು ಅದ್ಧೂರಿಯಾಗಿ ಆಯೋಜಿಸಲು ಆರು ತಿಂಗಳಿನಿಂದ ಸಿದ್ಧತೆ ನಡೆಸುತ್ತಿದ್ದು, ಕಳೆದ ಎರಡು ತಿಂಗಳಿಂದ ಪ್ರತಿನಿತ್ಯ ವಿಶೇಷ ನಿಗಾವಹಿಸಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಕ್ರೀಡೆ ಜೊತೆಯಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸುವುದು ಸರ್ಕಾರದ ಉದ್ದೇಶವಾಗಿದ್ದು, ಈ ಕಾರಣಕ್ಕಾಗಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಅನ್ನು 'ಹಸಿರು ಕ್ರೀಡಾಕೂಟ' (ಗ್ರೀನ್ ಗೇಮ್ಸ್ )ಎಂದು ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು. ಇದೇ ದಿನ ಕಂಠೀರವ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಹೊಸ ಸಿಂಥೆಟಿಕ್ ಅಥ್ಲೆಟಿಕ್ ಟ್ಯ್ರಾಕ್‌ನ್ನು ಉದ್ಘಾಟನೆಗೊಳಿಸಲಾಗುತ್ತದೆ.