ಬೆಂಗಳೂರು: ವಿಧಾನಸೌಧದಲ್ಲಿ ಸ್ಪೀಕರ್ ಆರ್.ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿದ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿರುವ ಕುರಿತು ಚರ್ಚೆ ನಡೆಸಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಆನಂದ್ ಸಿಂಗ್ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆನಂದ್ ಸಿಂಗ್ ವಿರುದ್ಧ ದೂರು ಕೂಡ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಇದ್ದರು.
ಪಕ್ಷಕ್ಕೆ ಯಾವುದೇ ರಾಜೀನಾಮೆ ಪತ್ರ ಕೊಟ್ಟಿಲ್ಲ: ಸ್ಪೀಕರ್ ಭೇಟಿ ಬಳಿಕ ಈಶ್ವರ್ ಖಂಡ್ರೆ ಮಾತನಾಡಿ, ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಆದರೆ ಪಕ್ಷಕ್ಕೆ ಅವರು ಯಾವುದೇ ರಾಜೀನಾಮೆ ಪತ್ರ ಕೊಟ್ಟಿಲ್ಲ. ಆನಂದ್ ಸಿಂಗ್ ರಾಜೀನಾಮೆ ಕೊಟ್ಟಿರುವುದು ಏಕೆ ಎಂಬ ಮಾಹಿತಿ ಪಡೆದಿದ್ದೇವೆ ಅಷ್ಟೇ. ಆದರೆ ರಾಜೀನಾಮೆ ಅಂಗೀಕಾರ ಮಾಡದಂತೆ ಸ್ಪೀಕರ್ಗೆ ದೂರು ಕೊಟ್ಟಿಲ್ಲ. ಈ ಬಗ್ಗೆ ಪಕ್ಷದ ನಾಯಕರ ಜೊತೆ ಚರ್ಚಿಸಿ ದೂರು ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ವಿವರಿಸಿದ್ದಾರೆ.