ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ನಗರದ ಹೃದಯಭಾಗದಲ್ಲಿರುವ ಕರ್ನಾಟಕ ಗಾಲ್ಫ್ ಅಸೋಸಿಯೇಷನ್ (ಕೆಜಿಎ) ಅನ್ನು ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ-2005ರ ಅಡಿ ಸಾರ್ವಜನಿಕ ಪ್ರಾಧಿಕಾರವೆಂದು ಘೋಷಿಸಿದ್ದ ಕರ್ನಾಟಕ ಮಾಹಿತಿ ಆಯೋಗದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಆಯೋಗದ ಆದೇಶ ಪ್ರಶ್ನಿಸಿ ಕೆಜಿಎ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಎನ್.ಎಸ್.ಸಂಜಯ ಗೌಡ ಅವರಿದ್ದ ನ್ಯಾಯಪೀಠ ನಿರ್ಧಾರ ಪ್ರಕಟಿಸಿತು.
ಬೆಂಗಳೂರು ಟರ್ಫ್ ಕ್ಲಬ್, ಮೈಸೂರು ಟರ್ಫ್ ಕ್ಲಬ್, ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಮತ್ತು ಲೇಡಿಸ್ ಕ್ಲಬ್ಗಳು ಸಹ ಸರ್ಕಾರಿ ಭೂಮಿಯನ್ನು ರಿಯಾಯಿತಿ ದರದಲ್ಲಿ ಗುತ್ತಿಗೆ ಪಡೆದಿವೆ. ಇದರಿಂದ ಈ ನಾಲ್ಕು ಸಂಸ್ಥೆಗಳು ಸಾರ್ವಜನಿಕ ಪ್ರಾಧಿಕಾರಗಳಾಗಿದ್ದು, ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಒಳಪಡುತ್ತವೆ. ಮೈಸೂರು ಟಫ್ ಕ್ಲಬ್ ಹಾಗೂ ಇತರೆ ಕ್ಲಬ್ಗಳ ಪ್ರಕರಣದಲ್ಲಿ ಹೇಳಿರುವಂತೆ ಕೆಜಿಎ ಸಹ 124 ಎಕರೆ ಸರ್ಕಾರಿ ಜಮೀನನ್ನು 2010 ರಿಂದ 30 ವರ್ಷ ಕಾಲ ಗುತ್ತಿಗೆ ಪಡೆದಿದೆ. ತನ್ನ ವಾರ್ಷಿಕ ನಿವ್ವಳ ಆದಾಯದಲ್ಲಿ ಅತ್ಯಂತ ಕಡಿಮೆ ಪ್ರಮಾಣ ಅಂದರೆ ಕೇವಲ ಶೇ.2 ಪ್ರಮಾಣವನ್ನು (ಸಬ್ಸಿಡಿ ದರ) ಬಾಡಿಗೆ ಪಾವತಿಸುತ್ತಿದೆ. ಸರ್ಕಾರಿ ಜಮೀನು ಗುತ್ತಿಗೆ ಪಡೆದ ಮತ್ತು ಸಬ್ಸಿಡಿ ದರದಲ್ಲಿ ಬಾಡಿಗೆ ಪಾವತಿ ಮಾಡುತ್ತಿರುವ ಕಾರಣ ಕೆಜಿಎ ಸಾರ್ವಜನಿಕ ಪ್ರಾಧಿಕಾರವಾಗಲಿದೆ. ಹೀಗಾಗಿ ಕೆಜಿಎ ಸಹ ಆರ್‌ಟಿಐ ಕಾಯ್ದೆಯ ವ್ಯಾಪ್ತಿಗೆ ಬರಲಿ ಎಂದು ಹೈಕೋರ್ಟ್ ಹೇಳಿದೆ.
ಇದನ್ನೂ ಓದಿ: ಗಾಲ್ಫ್ ಅಸೋಸಿಯೇಷನ್ ಪದಾಧಿಕಾರಿಗಳ ವಿರುದ್ಧ ದಾಖಲಾಗಿದ್ದ ದೂರು ರದ್ದುಪಡಿಸಿದ ಹೈಕೋರ್ಟ್
ಪ್ರಕರಣದ ಹಿನ್ನೆಲೆ: ವಕೀಲ ಎಸ್.ಉಮಾಪತಿ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿ ಕೆಜಿಎಗೆ 2012 ರ ಆಗಸ್ಟ್ 30 ರಂದು ಅರ್ಜಿ ಸಲ್ಲಿಸಿದ್ದರು. ಆದರೆ, ತಾನು ಮಾಹಿತಿ ಹಕ್ಕು ಕಾಯ್ದೆಗೆ ಒಳಪಡುವುದಿಲ್ಲ ಎಂದಿದ್ದ ಕೆಜಿಎ, ಮಾಹಿತಿ ನೀಡಲು ನಿರಾಕರಿಸಿತ್ತು. ಇದರಿಂದಾಗಿ ಮಾಹಿತಿ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಆಯೋಗ, ಕೆಜಿಎ ಸಾರ್ವಜನಿಕ ಪ್ರಾಧಿಕಾರವೆಂದು ಘೋಷಿಸಿ 2014 ರ ಅಕ್ಟೋಬರ್ 14 ರಂದು ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಕೆಜಿಎ, ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿತ್ತು.
ಕೆಜಿಎ ಸಲ್ಲಿಸಿದ ತಕರಾರು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ ಕರ್ನಾಟಕ ಮಾಹಿತಿ ಆಯೋಗ ನೀಡಿದ ಆದೇಶಕ್ಕೆ ಒಪ್ಪಿಗೆ ಕೊಟ್ಟಿದೆ. ಹೀಗಾಗಿ ಕೆಜಿಎಗೆ ಮತ್ತೆ ಹಿನ್ನಡೆ ಅನುಭವಿಸಿದೆ. ಇನ್ನು ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ಹೈಕೋರ್ಟ್ ನೀಡಿದ ಆದೇಶ ವಿರುದ್ಧ ಮತ್ತೆ ತಕರಾರು ಅರ್ಜಿ ಸಲ್ಲಿಸಲಿದೆಯೇ ಅಥವಾ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಸಲ್ಲಿಸಲಿದೆಯೇ ಎಂಬುದನ್ನು ಕಾದು ನೋಡಬೇಕು.
ಇದನ್ನೂ ಓದಿ: ಸುಪ್ರೀಂ ತೀರ್ಪು ಹಿನ್ನಡೆಯಲ್ಲ, ಪ್ರತಿಭಟನೆ ಮುಂದುವರಿಯುತ್ತದೆ: ಕುಸ್ತಿಪಟುಗಳ ಹೇಳಿಕೆ