ಬೆಂಗಳೂರು: ಹಿಂಸಾಚಾರ ನಡೆಯುವ ಸಾಧ್ಯತೆ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ಕೆ.ಜಿ. ಹಳ್ಳಿ ಹಾಗೂ ಡಿ.ಜೆ. ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ, ಆಗಸ್ಟ್ 22ರ ಬೆಳಗ್ಗೆ 6ಗಂಟೆವರೆಗೆ ನಿಷೇಧಾಜ್ಞೆ ಮುಂದುವರೆಸುವಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಆ.11ರಂದು ನಡೆದ ದೊಡ್ಡ ಮಟ್ಟದ ಗಲಭೆ ಹಿನ್ನೆಲೆ ಈ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿಯಲ್ಲಿತ್ತು. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಗುಪ್ತಚರ ಇಲಾಖೆ ನೀಡಿದ ಮಾಹಿತಿಯಂತೆ 16ರವರೆಗೂ ನಿಷೇಧಾಜ್ಞೆ ವಿಸ್ತರಣೆ ಮಾಡಲಾಗಿತ್ತು. ಸದ್ಯ ಆ.22ರ ಬೆಳಗ್ಗೆ 6 ಗಂಟೆವರೆಗೂ ನಿಷೇಧಾಜ್ಞೆ ವಿಸ್ತರಿಸಲಾಗಿದೆ.
ನಿಷೇಧಾಜ್ಞೆ ಸ್ಥಳಗಳಲ್ಲಿ ಯಾವುದೇ ರೀತಿಯ ಪ್ರತಿಭಟನೆ, ಧರಣಿ, ಮುತ್ತಿಗೆ, ಸತ್ಯಾಗ್ರಹ, ಮೆರವಣಿಗೆ ನಡೆಸುವಂತಿಲ್ಲ. ಐದಕ್ಕಿಂತ ಜನ ಸೇರುವುದು, ಮೆರವಣಿಗೆ ಅಥವಾ ಸಭೆ ನಡೆಸುವುದು ಹಾಗೂ ಪಟಾಕಿ ಸಿಡಿಸುವುದು ಕಾನೂನುಬಾಹಿರವಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸುವುದು ಕಂಡುಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.