ಬೆಂಗಳೂರು: ಪೊಲೀಸರ ಸೋಗಿನಲ್ಲಿ ವಾಹನ ಸವಾರರೊಬ್ಬರನ್ನು ಅಡ್ಡಗಟ್ಟಿದ ಸುಲಿಗೆಕೋರರು ಜಪ್ತಿ ನೆಪದಲ್ಲಿ ಬೈಕ್ ಕಳ್ಳತನ ಹಾಗೂ 94 ಸಾವಿರ ರೂ. ಹಣ ವಸೂಲಿ ಮಾಡಿದ್ದ ನಾಲ್ವರು ಆರೋಪಿಗಳನ್ನು ಕೆಂಗೇರಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಬಿಸ್ವಾಸ್ ರಾಯ್ ಎಂಬುವರು ನೀಡಿದ ದೂರಿನ ಮೇರೆಗೆ ನಗರದ ನಿವಾಸಿಗಳಾದ ಶರತ್ ಶೆಟ್ಟಿ, ಪೂರ್ವಿಕ್ ರಾಜ್, ಮೋಹನ್ ಕುಮಾರ್ ಹಾಗೂ ತಪಸ್ ರಾಯ್ ಎಂಬುರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಎರಡು ಬೈಕ್ ಹಾಗೂ 41 ಸಾವಿರ ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಕೃತ್ಯದಲ್ಲಿ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ನಗರ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಮೇ 25 ರಂದು ನೈಸ್ ರಸ್ತೆ ಕೊಮ್ಮಘಟ್ಟ ಮೇಲ್ಸೇತುವೆ ಬಳಿ ಬಿಸ್ವಾಸ್ ರಾಯ್ ಎಂಬುವರು ಬೈಕ್ ನಲ್ಲಿ ಹೋಗುವಾಗ ಪೊಲೀಸರ ಸೋಗಿನಲ್ಲಿ ಇವರ ವಾಹನ ತಡೆದು ಕೊರೊನಾ ನಿಯಮ ಉಲ್ಲಂಘಿಸಿದ್ದೀರ ಎಂದು ಹೇಳಿ, ಬೈಕ್ ಜಪ್ತಿ ಮಾಡಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಬಂದು ವಾಹನ ಬಿಡಿಸಿಕೊಂಡು ಹೋಗಿ ಎಂದು ಹೇಳಿದ್ದಾರೆ. ಪೊಲೀಸರೆಂದು ನಂಬಿದ ರಾಯ್ ಬೈಕ್ ಬಿಟ್ಟು ಬಂದಿದ್ದಾರೆ. ಮಾರನೇ ದಿನ ಠಾಣೆಗೆ ಹೋಗಿ ವಿಚಾರಿಸಿದಾಗ ಅಸಲಿ ಪೊಲೀಸರು ಜಪ್ತಿ ಮಾಡದಿರುವುದನ್ನು ಖಚಿತಪಡಿಸಿದ್ದಾರೆ. ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ವಸಂತ್ ಕೃತ್ಯ ನಡೆದ ಸ್ಥಳದಲ್ಲಿ ಸೆರೆಯಾದ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿದ್ದಾರೆ. ದೂರುದಾರ ಅಕೌಂಟ್ ನಲ್ಲಿದ್ದ ಹಣವನ್ನು ಎಟಿಎಂ ಮೂಲಕ ಬಿಡಿಸಿಕೊಂಡು ಮತ್ತೊಂದು ಅಕೌಂಟ್ ಗೆ ಹಣವನ್ನು ಆರೋಪಿಗಳು ವರ್ಗಾಯಿಸಿದ್ದರು. ಬೈಕ್ ಡಿಕ್ಕಿಯಲ್ಲಿದ್ದ ಎಟಿಎಂ ಕಾರ್ಡ್ ಹಿಂದೆ ಬಿಸ್ಚಾಸ್ ರಾಯ್ ಪಾಸ್ವರ್ಡ್ ಬರೆದುಕೊಂಡಿದ್ದ. ಇದು ಆರೋಪಿಗಳಿಗೆ ವರದಾನವಾಗಿತ್ತು. ಎಟಿಎಂ ಮುಖಾಂತರ ಹಣ ವಿತ್ಡ್ರಾ ಮಾಡಿ ಆರೋಪಿಗಳು ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡಿದ್ದರು. ಈ ಮಾಹಿತಿ ಆಧರಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದೂರುದಾರನ ಜೊತೆಗಿದ್ದವನೇ ಐಡಿಯಾ ಕೊಟ್ಟು ಸುಲಿಗೆ ಮಾಡಿಸಿದ!
ಪ್ರಕರಣ ಆರೋಪಿಗಳ ಪೈಕಿ ಪಶ್ಚಿಮ ಬಂಗಾಳ ಮೂಲದ ಆರೋಪಿ ತಪಸ್ ರಾಯ್ ಎಂಬಾತ ದೂರುದಾರ ಬಿಸ್ವಾಸ್ ರಾಯ್ ಜೊತೆ ಬಾರ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ. ಕೆಲಸ ಮಾಡಿ ಹಣ ನೀಡಲು ಮಾಲೀಕ ಸತಾಯಿಸುತ್ತಿದ್ದರಿಂದ ಆಕ್ರೋಶಗೊಂಡು ಸ್ನೇಹಿತರಿಗೆ ಸುಲಿಗೆ ಮಾಡುವ ಐಡಿಯಾ ಕೊಟ್ಟಿದ್ದ. ಸುಲಿಗೆ ಮಾಡುವಾಗಲೂ ಮಾಲೀಕ ಬಿಸ್ವಾಸ್ ರಾಯ್ ಜೊತೆಗಿದ್ದು, ಏನು ಗೊತ್ತಿಲ್ಲದಂತೆ ನಾಟಕವಾಡಿದ್ದ. ಮಾಲೀಕನ ಬಳಿ ಹಣವಿದೆ. ಈತನ ಬಳಿ ಸುಲಿಗೆ ಮಾಡಿದರೆ ಸುಲಭವಾಗಿ ಹಣ ಗಳಿಸಬಹುದು ಎಂದು ಲೊಕೇಷನ್ ಸಮೇತ ಸಹಚರರಿಗೆ ಹೇಳಿರುವುದು ತನಿಖೆ ವೇಳೆ ಗೊತ್ತಾಗಿದೆ.
ಇಂಜಿನಿಯರ್ ಸ್ಟೂಡೆಂಟ್ ಗಳೇ ಸುಲಿಗೆಕೋರರು
ಬಸವೇಶ್ವರ ನಿವಾಸಿ ಶರತ್ ಶೆಟ್ಟಿ ಸಿವಿಲ್ ಇಂಜಿನಿಯರ್, ಪೂರ್ವಿಕ್ ರಾಜ್ ನಾಲ್ಕನೇ ಸೆಮಿಸ್ಟರ್ ಇಂಜಿನಿಯರ್ ವಿದ್ಯಾರ್ಥಿಗಳಾಗಿದ್ದಾರೆ. ಮತ್ತೋರ್ವ ಆರೋಪಿ ಮೋಹನ್ ಕುಮಾರ್ ಕಂಪ್ಯೂಟರ್ ಆಪರೇಟರ್ ಆಗಿದ್ದಾನೆ. ಲಾಕ್ಡೌನ್ ವೇಳೆ ಸಂಪಾದನೆ, ಹಣ ವಿಲ್ಲದ ಪರಿಣಾಮ ಸ್ನೇಹಿತ ತಪಸ್ ರಾಯ್ ಸೂಚನೆ ಮೇರೆಗೆ ಸುಲಿಗೆ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.