ಬೆಂಗಳೂರು: ಆನ್ಲೈನ್ನಲ್ಲಿ ಆಸ್ತಿ ನೋಂದಣಿ ಮಾಡುವ, ನೋಂದಣಿ ಹಾಗೂ ಮುದ್ರಾಂಕ ಇಲಾಖೆಯ "ಕಾವೇರಿ ವೆಬ್ಸೈಟ್" ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಕೋರಿ ಎರಡನೇ ಬಾರಿ ಇಲಾಖೆಯ ಉಪ ಮಹಾನಿರೀಕ್ಷಕ ತ್ರಿಲೋಕ್ ಚಂದ್ರ ಅವರಿಗೆ ಸಿಸಿಬಿ ಪೊಲೀಸರು ಪತ್ರ ಬರೆದಿದ್ದಾರೆ.
ಯಾವ ರೀತಿಯಲ್ಲಿ ಮೋಸ ನಡೆದಿದೆ, ಹೇಗೆಲ್ಲಾ ಮೋಸ ನಡೆದಿರಬಹುದು, ಅಕ್ರಮದಿಂದ ಸರ್ಕಾರಕ್ಕೆ ಎಷ್ಟು ನಷ್ಟವಾಗಿದೆ ಎಂಬುದರ ಬಗ್ಗೆ ವರದಿ ನೀಡುವಂತೆ ಇಲಾಖೆಗೆ ಹೇಳಲಾಗಿತ್ತು. ವರದಿ ಇನ್ನೂ ಕೈ ಸೇರದ ಹಿನ್ನೆಲೆ ಮಾಹಿತಿ ನೀಡುವಂತೆ ಮತ್ತೊಂದು ಬಾರಿ ಪತ್ರ ಬರೆದಿರುವುದಾಗಿ ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಇಂಜಿಯರ್ಗಳಿಗೂ ಶುರುವಾಯ್ತು ಬಂಧನದ ಭೀತಿ: ಸಬ್ ರಿಜಿಸ್ಟ್ರಾರ್ ಗಳ ಮೇಲೆ ಗಂಭೀರ ಆರೋಪ ಬಂದ ಬೆನ್ನಲ್ಲೇ ಉಪ ನೋಂದಣಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಂಜಿನಿಯರ್ ಗಳಿಗೂ ನೊಟೀಸ್ ನೀಡಲು ಸಿಸಿಬಿ ಸಿದ್ಧತೆ ನಡೆಸಿದೆ. ವೆಬ್ಸೈಟ್ ಓಪನ್ ಮಾಡಲು ಸಬ್ ರಿಜಿಸ್ಟ್ರಾರ್ ಹೊರತುಪಡಿಸಿ ಇಂಜಿನಿಯರ್ಗಳಿಗೆ ಮಾತ್ರ ಪಾಸ್ ವರ್ಡ್ ಗೊತ್ತಿತ್ತು. ಹೀಗಾಗಿ ಪ್ರಕರಣದಲ್ಲಿ ಇಂಜಿಯರ್ಗಳು ವೆಬ್ಸೈಟ್ ತಿರುಚಿ ಅಕ್ರಮ ಎಸಗಿರುವುದು ಸಿಸಿಬಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ ಎಂದು ಹೇಳಲಾಗ್ತಿದೆ.
ಕಳೆದ ವರ್ಷ ಡಿ.7ರಿಂದ 18ರವರೆಗೆ ಕಾವೇರಿ ವೆಬ್ಸೈಟ್ನ್ನು 400ಕ್ಕೂ ಹೆಚ್ಚು ಬಾರಿ ತಿರುಚಿದ್ದಾರೆ ಎಂದು ವೆಬ್ಸೈಟ್ ನಿರ್ವಹಿಸುವ ಪುಣೆಯ ಸಿ-ಡ್ಯಾಕ್ ಸಂಸ್ಥೆಯು ನೋಂದಣಿ ಹಾಗೂ ಮುದ್ರಾಂಕ ಇಲಾಖೆ ವರದಿ ನೀಡಿತ್ತು. ಇದರಂತೆ ವರದಿ ಆಧರಿಸಿ ಉಪ ಮಹಾನಿರೀಕ್ಷಕ ತ್ರಿಲೋಕ್ ಚಂದ್ರ ಆಂತರಿಕ ತನಿಖಾ ಸಮಿತಿ ರಚಿಸಿದ್ದರು. ಬಳಿಕ ಸೈಬರ್ ಠಾಣೆಗೆ ನೀಡಿದ್ದ ದೂರಿನಲ್ಲಿ ಕೃಷಿ ಜಮೀನುಗಳನ್ನು ಅಕ್ರಮವಾಗಿ ರೆವಿನ್ಯೂ ಸೈಟ್ ಗಳಾಗಿ ಪರಿವರ್ತಿಸಿ, ಕಾವೇರಿ ವೆಬ್ಸೈಟ್ನ್ನು ತಮಗೆ ಬೇಕಾದ ರೀತಿಯಲ್ಲಿ 400ಕ್ಕೂ ಹೆಚ್ಚು ಬಾರಿ ತಿರುಚಿದ್ದಾರೆ. ಈ ಮೂಲಕ ಸರ್ಕಾರದ ಖಜಾನೆಗೆ ಕೋಟ್ಯಂತರ ರೂ.ತೆರಿಗೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ದೂರಿನನ್ವಯ ಆನೇಕಲ್, ದಾಸನಪುರ, ಪೀಣ್ಯ, ಮಾದನಾಯಕನಹಳ್ಳಿ, ಲಗ್ಗೆರೆ, ಕೆಂಗೇರಿ, ತಾವರೆಕೆರೆ, ಹೊಸಕೋಟೆ, ಬ್ಯಾಟರಾಯನಪುರ ಹಾಗೂ ಬಿಡಿಎ ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿ ಸೇರಿ ಒಟ್ಟು 12 ಸಬ್ ರಿಜಿಸ್ಟಾರ್ ಗಳಿಗೆ ವಿಚಾರಣೆ ಹಾಜರಾಗುವಂತೆ ಸಿಸಿಬಿ ನೊಟೀಸ್ ಜಾರಿ ಮಾಡಿತ್ತು. ಆದ್ರೆ ಸಿಸಿಬಿ ನೊಟೀಸ್ ನೀಡಿದ 11 ಮಂದಿ ಹಾಗೂ ನೊಟೀಸ್ ನೀಡದ 7 ಉಪ ನೋಂದಣಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗದೆ ತೆರೆಮರೆಯಲ್ಲಿ ಸಿಟಿ ಸಿವಿಲ್ ಕೋರ್ಟ್ಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.