ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನಾಲಿಗೆಯಲ್ಲಿ ಮೂಳೆ ಮಾತ್ರವಲ್ಲ, ನಿಯಂತ್ರಣವೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದ್ದಾರೆ. ಬೆಂಗಳೂರಿನ ಸದಾಶಿವ ನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ನಮ್ಮ ಹಳ್ಳಿ ಕಡೆ ಇಂತಹವರಿಗೆ ಬಚ್ಚಲು ಬಾಯಿ ಅಂತಾರೆ. ಕಟೀಲ್ ಒಂದು ಪಕ್ಷದ ರಾಜ್ಯಾಧ್ಯಕ್ಷರು, ಸಂಸದರು. ಅವರು ಮಾತನಾಡಿದರೆ ಅದಕ್ಕೆ ಸಾಕ್ಷಿ ಇರಬೇಕು. ಅವರು ಇದುವರೆಗೂ ಮಾತನಾಡಿರುವ ಯಾವುದಾದರೂ ವಿಚಾರದಲ್ಲಿ ಏನಾದರೂ ಸಾಕ್ಷಿ ಇದೆಯಾ? ಎಂದು ಪ್ರಶ್ನಿಸಿದರು.
ಕಟೀಲ್ ಅವರು ಮೊದಲು ಯತ್ನಾಳ್, ನಿರಾಣಿ, ಹೆಚ್ ವಿಶ್ವನಾಥ್, ಯೋಗೇಶ್ವರ್ ಅವರ ಮಾತಿಗೆ ಉತ್ತರ ನೀಡಲಿ. ಕಟೀಲ್ ಅವರಿಗೆ ಪಕ್ಷದಲ್ಲಿ ಹಿಡಿತವಿಲ್ಲ. ಅವರು ಪಕ್ಷದ ಅಧ್ಯಕ್ಷರು, ನಮ್ಮ ಪಕ್ಷದ ಬಗ್ಗೆ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ನಾನು ಪ್ರತಿಕ್ರಿಯೆ ನೀಡುತ್ತಿದ್ದೇನೆ. ಇಲ್ಲದಿದ್ದರೆ ನನ್ನಂತಹವರ ಪ್ರತಿಕ್ರಿಯೆ ಪಡೆಯಲು ಅವರು ಯೋಗ್ಯರಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ನಾಯಕರು ಸಭೆ ಮಾಡಿದರೆ ಚಪ್ಪಲಿಗಳು ಕೈಗೆ ಬರುತ್ತವೆ ಎಂಬ ಕಟೀಲ್ ಅವರ ಹೇಳಿಕೆ ಬಗ್ಗೆ ಪ್ರಶ್ನೆ ಮಾಡಿದಾಗ ಶಿವಕುಮಾರ್ ಅವರಿಂದ ಈ ಪ್ರತಿಕ್ರಿಯೆ ವ್ಯಕ್ತವಾಯಿತು.
ಕಾಂಗ್ರೆಸ್ ಒಡೆಯಲು ಟಿಆರ್ಎಸ್ ನಾಯಕ ಕೆ.ಸಿ ಚಂದ್ರಶೇಖರರಾವ್ ಅವರು ಹಣ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರರಿಸಿದ ಡಿಕೆಶಿ ‘‘ಈ ಬಗ್ಗೆ ನನಗೆ ಗೊತ್ತಿಲ್ಲ. ಹಣ ಕೊಟ್ಟಿರುವವರು ಹಾಗೂ ತೆಗೆದುಕೊಂಡವರನ್ನು ಕೇಳಿ. ಬೇರೆಯವರು ವೈಯಕ್ತಿಕ ವಿಚಾರವಾಗಿ ಚಂದ್ರಶೇಖರ್ ಅವರನ್ನು ಭೇಟಿ ಮಾಡಿರಬಹುದು, ಅದಕ್ಕೆ ನಾವು ಪ್ರಶ್ನೆ ಮಾಡಲು ಆಗುವುದಿಲ್ಲ’’ ಎಂದು ತಿಳಿಸಿದರು. ಫೆಬ್ರವರಿ 2 ರಂದು ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಈಗಾಗಲೇ ನಮ್ಮ ನಾಯಕರು ಆಕಾಂಕ್ಷಿಗಳ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ನಾವು ನಮ್ಮ ಪ್ರವಾಸ ಮುಗಿಸಿ ಚರ್ಚೆ ಮಾಡಿ, ಆದಷ್ಟು ಬೇಗ ತೀರ್ಮಾನ ಮಾಡುತ್ತೇವೆ ಎಂದು ಮೊದಲ ಟಿಕೆಟ್ ಪಟ್ಟಿ ಬಗ್ಗೆ ಡಿಕೆಶಿ ತಿಳಿಸಿದರು.
ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ವಿಫಲವಾಗಿದೆ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೊದಲು ಬೊಮ್ಮಾಯಿ ಅವರ ನೇತೃತ್ವದಲ್ಲಿ ರಾಜ್ಯ ಚುನಾವಣೆ ಎದುರಿಸಲಾಗುವುದು ಎಂದು ತಿಳಿಸಿದ್ದರು. ಆದರೆ ಈಗ ಮೋದಿ ಅವರ ನೇತೃತ್ವದಲ್ಲಿ ಚುನಾವಣೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಆ ಮೂಲಕ ರಾಜ್ಯ ನಾಯಕತ್ವ ವಿಫಲವಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ನಾವು ಜನರ ಭಾವನೆ ಅರಿತು ಪ್ರಜಾಧ್ವನಿ ಕಾರ್ಯಕ್ರಮ ಘೋಷಣೆ ಮಾಡಿದ್ದೇವೆ. ಅದಾದ ನಂತರ ಬಿಜೆಪಿಯವರು ನಾವು ಕೂಡ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.
ಮನೆಯೊಡತಿ ಯೋಜನೆ : ಕಳೆದ ಮೂರೂವರೆ ವರ್ಷಗಳಿಂದ ಅಧಿಕಾರದಲ್ಲಿ ಇದ್ದರೂ ಯಾಕೆ ಮಾಡಲಿಲ್ಲ? ನಾವು ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ನೀಡಲಾಗುವುದು ಎಂದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದೇವೆ. ಇನ್ನು, ಎರಡನೇ ಗ್ಯಾರೆಂಟಿ ಯೋಜನೆ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿರುವ ಮಹಿಳೆಯರಿಗೆ ನೆರವಾಗಲು ಮನೆಯೊಡತಿಗೆ ತಿಂಗಳಿಗೆ 2 ಸಾವಿರದಂತೆ ವರ್ಷಕ್ಕೆ 24 ಸಾವಿರ ಆರ್ಥಿಕ ನೆರವು ನೀಡಲು ನಿರ್ಧರಿಸಿದ್ದೇವೆ. ಈ ಯೋಜನೆ ಎಲ್ಲರಿಗೂ ಅನ್ವಯ ಆಗುತ್ತದೆ. ಕೆಲವರು ಈ ಸೌಲಭ್ಯ ಬೇಡ ಎಂದರೆ ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಇದನ್ನೂ ಓದಿ: ಸ್ಯಾಂಟ್ರೋ ರವಿ ಪ್ರಕರಣವನ್ನ ಮುಚ್ಚಿ ಹಾಕುವ ಯತ್ನ: ಸಿದ್ದರಾಮಯ್ಯ ಆರೋಪ