ಬೆಂಗಳೂರು: ರಾಜ್ಯ ಸರ್ಕಾರದ ಜೊತೆ ಸಮಾಲೋಚನೆ ನಡೆಸದೆ ಏಕಾಏಕಿ ಕಸ್ತೂರಿ ರಂಗನ್ ವರದಿ ಜಾರಿ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದ್ದು, ಈ ಭರವಸೆಯನ್ನು ಮತ್ತೊಮ್ಮೆ ಕೇಂದ್ರಕ್ಕೆ ನೆನಪು ಮಾಡಿಕೊಡಲಾಗುತ್ತದೆ ಎಂದು ಸಿಎಂ ಭರವಸೆ ನೀಡಿದ್ದಾರೆ ಎಂದು ಶಾಸಕ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ, ಸಾಗರ ಶಾಸಕ ಹರತಾಳು ಹಾಲಪ್ಪ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸೇರಿದಂತೆ ಹಲವರ ನಿಯೋಗ ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿ, ಕಸ್ತೂರಿ ರಂಗನ್ ವರದಿ ಯಥಾವತ್ ಜಾರಿಗೆ ಅವಕಾಶ ನೀಡದಂತೆ ಮನವಿ ಮಾಡಿತು.
ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅರಗ ಜ್ಞಾನೇಂದ್ರ, ಕಸ್ತೂರಿ ರಂಗನ್ ವರದಿ ಮಲೆನಾಡ ಜನರ ತಲೆಯ ಮೇಲಿನ ತೂಗುಗತ್ತಿಯಾಗಿದೆ. ತೀರ್ಥಹಳ್ಳಿಯ 146 ಗ್ರಾಮ, ಸಾಗರದ 132 ಗ್ರಾಮಗಳು ಇದರ ವ್ಯಾಪ್ತಿಗೆ ಬರಲಿವೆ. ಇದರಿಂದ ಇಡೀ ತಾಲೂಕು ನಿಷೇಧಿತ ಪ್ರದೇಶವಾಗಲಿದೆ. ಹಾಗಾಗಿ ಇದನ್ನು ತಡೆಯುವ ಬಗ್ಗೆ ಸಿಎಂ ಜೊತೆ ಸಮಾಲೋಚನೆ ನಡೆಸಲಾಯಿತು ಎಂದು ತಿಳಿಸಿದರು.
ಆರು ತಿಂಗಳ ಹಿಂದೆ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಜೊತೆ ಸಿಎಂ ಮಾತನಾಡಿದ್ದರು. ಆದರೆ ಈಗ ಹಸಿರು ಪೀಠ ಕೂಡ ವರದಿ ಜಾರಿಗೆ ಒತ್ತಡ ಹೇರುತ್ತಿದೆ. ಪಿಐಎಲ್ಗಳು ಸಲ್ಲಿಕೆಯಾಗಿವೆ. ಈ ಹಿನ್ನೆಲೆಯಲ್ಲಿ ಸಿಎಂ ಜೊತೆ ಮಾತುಕತೆ ನಡೆಸಲಾಯಿತು. ನಮ್ಮ ಜೊತೆ ಸಮಾಲೋಚನೆ ನಡೆಸದೆ ಏಕಾಏಕಿ ವರದಿ ಜಾರಿ ಮಾಡಲ್ಲ ಎಂದು ಕೇಂದ್ರ ಸಚಿವರು ಈ ಹಿಂದೆ ಆಶ್ವಾಸನೆ ನೀಡಿದ್ದಾರೆ. ಈ ಆಶ್ವಾಸನೆಯನ್ನು ಮತ್ತೊಮ್ಮೆ ನೆನಪು ಮಾಡಿಕೊಡಲಿದ್ದೇನೆ ಎಂದು ಸಿಎಂ ನಮಗೆ ತಿಳಿಸಿದರು. ಯಾವ ಕಾರಣಕ್ಕೂ ವರದಿ ಯಥಾವತ್ ಜಾರಿಯಾಗಬಾರದು. ಪುನರ್ ಪರಿಶೀಲನೆ ಆಗಬೇಕು. ಈ ಬಗ್ಗೆ ಒತ್ತಡ ಹೇರುವ ಕೆಲಸವನ್ನು ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಹೇಳಿದರು.