ಬೆಂಗಳೂರು: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ( KAR-TET) ಯನ್ನು 2023ನೇ ಸಾಲಿನಿಂದ ಎರಡು ಬಾರಿ ಅಂದರೆ, ಜನವರಿ ಹಾಗೂ ಜೂನ್ ತಿಂಗಳಲ್ಲಿ ನಡೆಸಲು ಸೂಚಿಸಲಾಗಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರದಾನ ಕಾರ್ಯದರ್ಶಿ ಹೆಚ್.ಎಸ್. ಶಿವಕುಮಾರ್ ಆದೇಶ ಹೊರಡಿಸಿದ್ದು, ವರ್ಷಕ್ಕೆ ಎರಡು ಸಲ ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯ ಆಯುಕ್ತರಿಗೆ ನಿರ್ದೇಶಿಸಿದ್ದಾರೆ.
ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ ಮಾದರಿಯಲ್ಲೇ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಲಾಗಿದೆ. ಹಲವು ಕಾರಣದಿಂದಾಗಿ ಪ್ರತಿ ವರ್ಷವೂ ಟಿಇಟಿ ಪರೀಕ್ಷೆಯು ವಿಳಂಬವಾಗುತ್ತಿದೆ. ಇತ್ತ ರಾಜ್ಯದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಕೋರ್ಸ್ ಮುಗಿಸಿ ಕಾಲೇಜುಗಳಿಂದ ಹೊರಬರುತ್ತಿದ್ದಾರೆ. ಆದರೆ ಟಿಇಟಿ ಪರೀಕ್ಷೆ ನಡೆಯದೇ, ಈ ಅಭ್ಯರ್ಥಿಗಳು ಶಿಕ್ಷಕರಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಇನ್ಮುಂದೆ ವರ್ಷಕ್ಕೆ ಎರಡು ಸಲ ಅಂದರೆ ಜನವರಿ, ಜೂನ್ ತಿಂಗಳಿನಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ಮೇ ತಿಂಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಿಇಟಿ ಪರೀಕ್ಷೆ, ಅರ್ಜಿ ಶುಲ್ಕ ಹೆಚ್ಚಳ: ಪ್ರಸ್ತುತ ಚಾಲನೆಯಲ್ಲಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ(6-8ನೇ ತರಗತಿ) ನೇಮಕಾತಿ ಪರೀಕ್ಷೆ (ಸಿಇಟಿ) ಯನ್ನು ಮೇ ತಿಂಗಳಲ್ಲಿ ನಡೆಸಲು ಸೂಚಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ಖಾಲಿ ಇರುವ 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ನಡೆಯಲಿದೆ.
ನೇಮಕಾತಿಗೆ ಅರ್ಜಿ ಶುಲ್ಕವನ್ನು ಶೆ.25ರಷ್ಟು ಹೆಚ್ಚಳ ಮಾಡಲಾಗಿದೆ. ಪರಿಶಿಷ್ಟ ಜಾತಿ/ಪಂಗಡ/ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಒಂದು ಹುದ್ದೆಗೆ ಅರ್ಜಿ ಸಲ್ಲಿಸಿದಲ್ಲಿ 625 ರೂ. ಹಾಗೂ ಎರಡು ಹುದ್ದೆಗೆ ಅರ್ಜಿ ಸಲ್ಲಿಸಿದ್ದರೆ 1,250 ರೂ. ನಿಗದಿಪಡಿಸಲಾಗಿದೆ. ಇತರ ಎಲ್ಲ ಅಭ್ಯರ್ಥಿಗಳಿಗೆ ಒಂದಕ್ಕೆ 1,250, ಎರಡು ಹುದ್ದೆಗೆ ಅರ್ಜಿ ಸಲ್ಲಿಸಿದ್ದರೆ 2,500 ರೂ. ನಿಗದಿ ಮಾಡಲಾಗಿದೆ.
ಇದನ್ನೂ ಓದಿ: ಅದ್ಧೂರಿಯಾಗಿ ಜರುಗಲಿದೆ ಬೆಂಗಳೂರು ಕರಗ ಮಹೋತ್ಸವ