ಬೆಂಗಳೂರು: ರಾಜ್ಯದಲ್ಲಿ ಜೂನ್ 14ರಂದು ಸಂಜೆ 6 ಗಂಟೆಗೆ ಕರ್ನಾಟಕ ಜನ ಸಂವಾದ ವರ್ಚುವಲ್ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಜೂನ್ 14ರ ರ‍್ಯಾಲಿಯನ್ನುದ್ದೇಶಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪಸ್ಥಿತರಿರಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ.
ಚಿತ್ರದುರ್ಗ, ದಾವಣಗೆರೆ, ತುಮಕೂರು, ಶಿವಮೊಗ್ಗ, ಹಾವೇರಿ, ಧಾರವಾಡ, ಗದಗದಲ್ಲಿ ರ‍್ಯಾಲಿ ನಡೆಯಲಿದೆ. ಈ ಎಲ್ಲಾ ಕಡೆಯಲ್ಲಿಯೂ ಸ್ಥಳೀಯ ಸಂಸದರು ಪಾಲ್ಗೊಳ್ಳಲಿದ್ದಾರೆ ಎಂದರು.
ಈಗಾಗಲೇ ರಾಜ್ಯದಲ್ಲಿ ಯುವಮೋರ್ಚಾ ರ‍್ಯಾಲಿಯು ಮೈಸೂರು, ಬಳ್ಳಾರಿ, ಹಾವೇರಿ, ಮೈಸೂರು ಗ್ರಾಮಾಂತರ ಹಾಗೂ ಕಲಬುರ್ಗಿ ಗ್ರಾಮಾಂತರ ಭಾಗಗಳಲ್ಲಿ ನಡೆದಿದೆ. ಮನೆ ಮನೆ ಸಂಪರ್ಕ ಅಭಿಯಾನದಲ್ಲಿ 14,750 ಬೂತ್ ಮಟ್ಟದಲ್ಲಿ 5,36,486 ಜನರು ಭಾಗವಹಿಸಿದ್ದಾರೆ ಎಂದು ವಿವರಿಸಿದರು.