ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ, ಹಂಚಿಕೆ ವಿಪರೀತವಾಗಿ ಹೆಚ್ಚಳವಾಗುತ್ತಿದೆ. ಈ ಸಂಬಂಧ ಬೆಂಗಳೂರು ಸಿಸಿಬಿ ದಾಳಿ ಮಾಡುತ್ತಲೇ ಇದೆ. ಅಂದ ಹಾಗೆ ಇವತ್ತು ಕೂಡಾ ದಾಳಿ ಮಾಡಿರುವ ಸಿಟಿ ಕ್ರೈಂ ಬ್ರಾಂಚ್ ಪೊಲೀಸರು ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಂಧಿಸಿದ್ದಾರೆ.
ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಇಬ್ಬರು ನೈಜೀರಿಯನ್ ಪ್ರಜೆಗಳಾದ ಜೋಸೆಫ್ ಎಂಡುಕ್ವೆ (38) ಮತ್ತು ಯುಜೋಚುಕ್ವು ಮಾರ್ಕ್ವೆರಿಕ್ (38) ಅಮೃತಹಳ್ಳಿ ಹಾಗೂ ಯಲಹಂಕ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭ್ಯವಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ಧಾರೆ.
ಬಂಧಿತರಿಂದ ಸುಮಾರು 75 ಲಕ್ಷ ರೂ. ಮೌಲ್ಯದ ಈಕಸ್ಟೇಸಿ ಮತ್ತು ಎಲ್ಎಸ್ಡಿ ಎಂಬ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಟೂರಿಸ್ಟ್ ಹಾಗೂ ಬಿಸಿನೆಸ್ ವೀಸಾದಡಿ ನಗರಕ್ಕೆ ಬಂದಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನಗರದಲ್ಲಿ ನೆಲೆಸಿ ಡ್ರಗ್ ಪೆಡ್ಲಿಂಗ್ನಲ್ಲಿ ಭಾಗಿಯಾಗಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.