ಬೆಂಗಳೂರು : ಕಳೆದ ಏಳು ದಿನಗಳಿಂದ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದ್ದು, ಸರ್ಕಾರ ಮತ್ತು ಸಾರಿಗೆ ನೌಕರರ ನಡುವಿನ ಗಲಾಟೆಯಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಇದರ ಬೆನ್ನಲ್ಲಿ ಬಿಎಂಟಿಸಿ ಸಂಸ್ಥೆ ಇದೀಗ ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ನೌಕರರಿಗೆ ಹಲವು ಎಚ್ಚರಿಕೆಗಳ ನೀಡುವುದ್ರ ಜೊತೆಗೆ ತರಬೇತಿ ಹಾಗು ಪ್ರೊಬೆಷನರಿ ನೌಕರರನ್ನ ವಜಾಗೊಳಿಸಿರುವ ಬಗ್ಗೆ ಮಾಹಿತಿ ನೀಡಿದೆ.
ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ, ತರಬೇತಿ ನೌಕರರ ವಜಾ ಪ್ರಕ್ರಿಯೆ ಮುಂದುವರೆದಿದೆ. ಕೆಲಸಕ್ಕೆ ಗೈರಾದ 124 ತರಬೇತಿ ಹಾಗೂ ಪ್ರೋಬೆಷನರಿ ನೌಕರರನ್ನ ವಜಾ ಮಾಡಲಾಗಿದೆ.
ಹೌದು, ನಿನ್ನೆ 63 ತರಬೇತಿ ಹಾಗೂ 61 ಪ್ರೋಬೆಷನರಿ ನೌಕರರನ್ನ ವಜಾಗೊಳಿಸಿ ಬಿಎಂಟಿಸಿ ಆದೇಶ ಹೊರಡಿಸಿದೆ. ಮೊನ್ನೆಯವರೆಗೆ 1484 ಜನ ತರಬೇತಿ ಹಾಗೂ ಪ್ರೋಬೆಷನರಿ ನೌಕರರಲ್ಲಿ 456 ಜನರನ್ನ ಬಿಎಂಟಿಸಿ ವಜಾಗೊಳಿಸಿತ್ತು. ನಿನ್ನೆ ಮತ್ತೆ 124 ಜನರನ್ನ ವಜಾಗೊಳಿಸಿರುವುದಾಗಿ ಬಿಎಂಟಿಸಿ ಆದೇಶ ಹೊರಡಿಸಿದೆ.
ಒಟ್ಟಾರೆಯಾಗಿ ಇಲ್ಲಿಯವರೆಗೆ 1,484 ತರಬೇತಿ ಹಾಗೂ ಪ್ರೋಬೆಷನರಿ ನೌಕರರಲ್ಲಿ ಒಟ್ಟು 580 ಜನರನ್ನ ಬಿಎಂಟಿಸಿ ವಜಾಗೊಳಿಸಿ ಆದೇಶ ಹೊರಡಿಸಿದೆ.
ಇನ್ನು 55 ವರ್ಷ ಮೇಲ್ಪಟ್ಟ ನೌಕರರಿಗೆ ವೈದ್ಯಕೀಯ ಪರೀಕ್ಷೆ ಪ್ರಮಾಣ ಪತ್ರ ನೀಡುವಂತೆ ತಿಳಿಸಿದ್ದ ಬಿಎಂಟಿಸಿ, ನಿನ್ನೆ ಸಂಜೆಯೊಳಗೆ ಪ್ರಮಾಣ ಪತ್ರ ನೀಡುವಂತೆ ಆದೇಶ ಹೊರಡಿಸಿದ್ದು, ಇವರಲ್ಲಿ 7 ಜನರಿಗೆ ನಿವೃತ್ತಿಯನ್ನ ಬಿಎಂಟಿಸಿ ಘೋಷಿಸಿದೆ.
ಇವುಗಳ ಜೊತೆಗೆ ಸಾರಿಗೆ ನೌಕರರಿಗೆ ಬಿಎಂಟಿಸಿ ಮತ್ತೊಂದು ಶಾಕ್ ನೀಡಿದೆ. ತರಬೇತಿ ಹಾಗೂ ಪ್ರೋಬೆಷನರಿ ನೌಕರರಾಯ್ತು ಈಗ ನೇರ ನೌಕರರನ್ನೇ ಸರ್ಕಾರ ಟಾರ್ಗೆಟ್ ಮಾಡಿದೆ.
ಬಿಎಂಟಿಸಿ ಇದೀಗ 260 ಸಾರಿಗೆ ನೌಕರರನ್ನ ಅಮಾನತ್ತು ಮಾಡಿದೆ. ಮುಷ್ಕರದಲ್ಲಿ ಭಾಗಿ ಹಾಗೂ ಬೇರೆ ನೌಕರರನ್ನ ಕೆಲಸ ಮಾಡಲು ತೊಂದರೆ ಉಂಟು ಮಾಡಿದ ನೌಕರರು ಅಮಾನತ್ತು ಮಾಡಲಾಗಿದೆ. ನಿನ್ನೆ 260 ನೌಕರರನ್ನ ಅಮಾನತ್ತು ಮಾಡಿ ಬಿಎಂಟಿಸಿ ಪಟ್ಟಿ ಬಿಡುಗಡೆ ಮಾಡಿದೆ.
ಇವೆಲ್ಲದರ ನಡುವೆ ಬಿಎಂಟಿಸಿ ಸಂಸ್ಥೆ ನೌಕರರಿಗೆ ಗುರುವಾರ ಸಂಜೆ 5 ಗಂಟೆಯೊಳಗೆ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿದೆ. 2,237 ನೌಕರರ ಹೆಸರನ್ನ ಉಲ್ಲೇಖಿಸಿ ಆದೇಶ ಹೊರಡಿಸಲಾಗಿದೆ.
ಮುಷ್ಕರದಲ್ಲಿ ಪಾಲ್ಗೊಂಡು ಸಾರ್ವಜನಿಕರಿಗೆ ನೌಕರರು ತೊಂದರೆ ಉಂಟುಮಾಡಿದ್ದಾರೆ. ಅಲ್ಲದೇ ಹಿರಿಯ ನೌಕರರಾಗಿ ಸಂಸ್ಥೆ ವಿಶ್ವಾಸ ಕಳೆದುಕೊಂಡು, ಸಂಸ್ಥೆಯು ಆರ್ಥಿಕವಾಗಿ ನಷ್ಟ ಅನುಭವಿಸುವಂತೆ ಮಾಡಿದ್ದಾರೆ. ಈ ಹಿನ್ನೆಲೆ 2,237 ಸಾರಿಗೆ ನೌಕರರು ಏಪ್ರಿಲ್ 15 ರ ಸಂಜೆ 5 ರೊಳಗೆ ತಮ್ಮ ಡಿಪೋಗಳಿಗೆ ಹಾಜರಾಗಬೇಕು. ಜೊತೆಗೆ ಯಾವ ಕಾರಣಕ್ಕೆ ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಬಾರದೆಂದು ಲಿಖಿತ ಸಮಜಾಯಿಷಿ ನೀಡಬೇಕು. ಇಲ್ಲದಿದ್ರೆ ನಿಮ್ಮ ವಿರುದ್ಧ ನಿಯಮಾವಳಿ ಪ್ರಕರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆದೇಶ ಹೊರಡಿಸಲಾಗಿದೆ.