ಬೆಂಗಳೂರು: ಮೊನ್ನೆಯಷ್ಟೇ ರಾಜ್ಯ ಸರ್ಕಾರಿ ನೌಕರರ ಮುಷ್ಕರ ಎದುರಿಸಿದ್ದ ರಾಜ್ಯ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಂದು ಪ್ರತಿಭಟನೆ ಹಮ್ಮಿಕೊಂಡ ದಿನ ಮಧ್ಯಾಹ್ನದ ವೇಳೆಗೆ ಶೇ. 17 ರಷ್ಟು ಮಧ್ಯಂತರ ಪರಿಹಾರ ವೇತನ ಹೆಚ್ಚಳ ಮಾಡಿ ನೌಕರರನ್ನು ಸಮಾಧಾನಗೊಳಿಸುವ ಪ್ರಯತ್ನವನ್ನು ಸರ್ಕಾರ ಮಾಡಿತ್ತು. ಇದೀಗ ರಸ್ತೆ ಸಾರಿಗೆ ನೌಕರರು ಮತ್ತೆ ಮುಷ್ಕರದ ಹಾದಿ ಹಿಡಿಯಲು ಮುಂದಾಗಿದ್ದಾರೆ. ಶನಿವಾರ ಸಂಜೆಯೊಳಗೆ ಆರನೇ ಪರಿಷ್ಕೃತ ವೇತನ ಜಾರಿಗೊಳಿಸದೇ ಇದ್ದರೆ ಪ್ರತಿಭಟನೆ ಆರಂಭಿಸುವುದಾಗಿ ಎಚ್ಚರಿಕೆ ರವಾನಿಸಿದ್ದಾರೆ.
ಆರನೇ ವೇತನ ಆಯೋಗದ ಅನ್ವಯ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರದಿಂದ ಪ್ರತಿಭಟನೆ ಆರಂಭಿಸಿದ್ದಾರೆ. ಸಾರಿಗೆ ಸಂಸ್ಥೆಗಳ ನೌಕರರ ಬೇಡಿಕೆ ಈಡೇರಿಸಲು ನೌಕರರ ಒಕ್ಕೂಟ ಶನಿವಾರ ಸಂಜೆ ತನಕ ಸರ್ಕಾರಕ್ಕೆ ಗಡುವು ನೀಡಿದೆ. ಸರ್ಕಾರ ನಿರ್ಲಕ್ಷ್ಯ ವಹಿಸಿದರೆ ಸಾರಿಗೆ ಮುಷ್ಕರ ಆರಂಭಿಸುವುದಾಗಿ ಹೇಳಿದ್ದಾರೆ.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾ ನಗರ ಸಾರಿಗೆ ನಿಗಮ (ಬಿಎಂಟಿಸಿ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್‌ಡಬ್ಲ್ಯುಕೆಆರ್‌ಟಿಸಿ) ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಮುಂದುವರಿಸಲಿದ್ದೇವೆ ಎಂದು ನೌಕರರು ಹೇಳಿದ್ದಾರೆ.
ಸಚಿವರು ಮಾತು ತಪ್ಪಿದ್ದಾರೆ: ಆರನೇ ವೇತನ ಆಯೋಗದ ಅನ್ವಯ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂಬುದು ಸಾರಿಗೆ ನೌಕರರ ಪ್ರಮುಖ ಬೇಡಿಕೆಯಾಗಿದೆ. ರಾಜ್ಯದ ಎಲ್ಲ ನಿಗಮಗಳಲ್ಲಿ ನೌಕರರು, ಹಗಲು-ರಾತ್ರಿ ದುಡಿಯುತ್ತಿದ್ದಾರೆ. ಆದರೆ, ನೌಕರರ ಬಗ್ಗೆ ಸಾರಿಗೆ ಸಚಿವರಿಗೆ ಯಾವುದೇ ಕಾಳಜಿ ಇಲ್ಲ. ಆರನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವ ಭರವಸೆ ನೀಡಿದ್ದರೂ ಸಚಿವರು ಮಾತು ತಪ್ಪಿದ್ದಾರೆ ಎಂಬುದು ನೌಕರರ ಆಕ್ರೋಶವಾಗಿದೆ.
ನೋಟಿಸ್ ನೀಡಿ ಮುಷ್ಕರ ಆರಂಭ: ಬುಧವಾರದಿಂದ ಪ್ರಾರಂಭವಾಗಿರುವ ಅನಿರ್ದಿಷ್ಟಾವಧಿ ಧರಣಿ ಮೂರನೇ ದಿನವಾದ ಶುಕ್ರವಾರವೂ ಮುಂದುವರೆದಿದೆ. ಶನಿವಾರ ನಮ್ಮ ಸಂಜೆ 5 ಗಂಟೆಯೊಳಗೆ ಬೇಡಿಕೆ ಈಡೇರಿಸುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಕಾರ್ಮಿಕ ಆಯುಕ್ತರಿಗೆ ಸೋಮವಾರ ನೋಟಿಸ್ ನೀಡಿ 14 ದಿನಗಳ ನಂತರ ಮುಷ್ಕರ ಆರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಆರ್. ಚಂದ್ರಶೇಖರ್ ತಿಳಿಸಿದ್ದಾರೆ.
ಈಗಾಗಾಲೇ ರಸ್ತೆ ಸಾರಿಗೆ ನಿಗಮದ ಎಂಡಿಗಳ ಜೊತೆ ರಸ್ತೆ ಸಾರಿಗೆ ನೌಕರರ ಒಕ್ಕೂಟ ಸಭೆ ನಡೆಸಿ, ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದೆ. ಈ ಸಂಬಂಧ ಮಾತುಕತೆ ಮುಂದುವರೆದಿದ್ದು, ವೇತನ ಹೆಚ್ಚಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಲಾಗುತ್ತಿದೆ.
ಈ ಬಾರಿ ಕೂಡ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಇಲ್ಲ; ಬಿಸಿ ನಾಗೇಶ್ ಸ್ಪಷ್ಟನೆ