ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ತೌಕ್ತೆ ಚಂಡಮಾರುತ ಎದ್ದಿರುವ ಪರಿಣಾಮ ರಾಜ್ಯದಲ್ಲಿ ಮಳೆಯಾಗುತ್ತಿದೆ. ಮುಂದಿನ ಐದು ದಿನ ಸಹ ವ್ಯಾಪಕ ಮಳೆಯಾಗಲಿದೆ.
ಹವಾಮಾನ ಇಲಾಖೆ ಈ ಬಗ್ಗೆ ಮುನ್ಸೂಚನೆ ನೀಡಿದ್ದು, ತೌಕ್ತೆ ಚಂಡಮಾರುತ ಪೂರ್ವ ಅರಬ್ಬಿ ಸಮುದ್ರದ ಮಧ್ಯಭಾಗದಲ್ಲಿದೆ. ಇದು ಇನ್ನಷ್ಟು ತೀವ್ರಗೊಳ್ಳುತ್ತ ಉತ್ತರದ ಕಡೆ ಚಲಿಸಲಿದೆ. ಗುಜರಾತ್ ಕರಾವಳಿಯಲ್ಲಿ ಈ ಸೈಕ್ಲೋನ್ ಇನ್ನಷ್ಟು ತೀವ್ರಗೊಂಡು ಮೇ 18ರ ಮಧ್ಯಾಹ್ನ ಹಾಗೂ ಸಾಯಂಕಾಲ ದಾಟಲಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನಾ ವಿಭಾಗದ ನಿರ್ದೇಶಕರಾದ ಸಿ.ಎಸ್.ಪಾಟೀಲ್ ತಿಳಿಸಿದರು.
ಇಂದು ಕರಾವಳಿ ಹಾಗೂ ದ.ಒಳನಾಡಿನಲ್ಲಿ ವ್ಯಾಪಕ ಮಳೆಯಾಗಿದ್ದು, ಉ.ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗಿದೆ. ಈ ಚಂಡಮಾರುತದ ಪ್ರಭಾವದಿಂದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮೇ 15ರಂದು ಹಲವು ಕಡೆ 20 ಸೆಂ.ಮೀ.ಗಿಂತಲೂ ಹೆಚ್ಚಿನ ಮಳೆಯಾಗಲಿರುವುದರಿಂದ ಮೇ 15ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಮೇ 16ರಂದು ಆರೆಂಜ್ ಅಲರ್ಟ್, ಮೇ 17-18ರಂದು ಯೆಲ್ಲೋ ಅಲರ್ಟ್ ಕೊಡಲಾಗಿದ್ದು, ಮೇ 1 ರಂದು ಮಳೆ ಮುಂದುವರೆಯಲಿದೆ.
ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮೇ 15ರಿಂದ 19ರವರೆಗೆ ವ್ಯಾಪಕ ಮಳೆಯಾಗಲಿದೆ. ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಹಾವೇರಿ, ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿರುವುದರಿಂದ ಮೇ 15 ಹಾಗೂ ಮೇ 16ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಸಿ.ಎಸ್.ಪಾಟೀಲ್ ತಿಳಿಸಿದರು. ಮಲೆನಾಡು ಜಿಲ್ಲೆಗಳಿಗೆ ಮೇ 17, 18, 19ರಂದು ಯೆಲ್ಲೋ ಅಲರ್ಟ್ ಕೊಡಲಾಗಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಮಳೆಯಾಗಲಿದೆ ಎಂದರು.
ಇನ್ನು ಬಲವಾದ ಗಾಳಿ ಹಾಗೂ ಅಲೆಗಳು ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದೆಂದು ಮೀನುಗಾರರಿಗೆ ಎಚ್ಚರಿಸಲಾಗಿದೆ.